ಉಡುಪಿ : ಇನ್ಮುಂದೆ ಆಟೋ ಚಾಲಕರು ಮನಸೋ ಇಚ್ಚೆ ದರ ಪಡೆಯುವಂತಿಲ್ಲ. ಎಪ್ರಿಲ್ 1 ರಿಂದ ಆಟೋ ಪ್ರಯಾಣಕ್ಕೆ ತಕ್ಕಂತೆ ಮೀಟರ್ ದರವನ್ನು ಪ್ರಯಾಣಿಕರಿಂದ ಪಡೆಯಬೇಕು. ಇಲ್ಲವಾದ್ರೆ ಅಂತವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ವಾರ್ನಿಂಗ್ ನೀಡಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದಲೂ ಆಟೋ ಪ್ರಯಾಣದರ ಪರಿಷ್ಕರಣೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಸಾರಿಗೆ ಪ್ರಾಧಿಕಾರದ ಸಭೆ ನಡೆಯಿತು. ಸಭೆಯಲ್ಲಿ ಎಪ್ರೀಲ್ 1ರಿಂದ ಉಡುಪಿ ಜಿಲ್ಲೆಯಲ್ಲಿ ಸಂಚರಿಸುವ ಆಟೋ ರಿಕ್ಷಾ ಪ್ರಯಾಣದರವನ್ನು ಪರಿಷ್ಕರಿಸಲಾಯಿತು. ನೂತನ ದರಪಟ್ಟಿಯ ಪ್ರಕಾರ 1.5 ಕಿ.ಮೀ. ವರೆಗೆ ಕನಿಷ್ಠ 30 ರೂಪಾಯಿ ದರ ನಿಗದಿ ಪಡಿಸಲಾಗಿದ್ದು, ನಂತರ ಪ್ರತೀ ಕಿ.ಮೀ. 17 ರೂಪಾಯಿ ನಿಗದಿಪಡಿಸಲಾಗಿದೆ. ಜಿಲ್ಲೆಯ ಎಲ್ಲಾ ಅಟೋರಿಕ್ಷಾ ಚಾಲಕ ಮತ್ತು ಮಾಲಕರು ತಮ್ಮ ಅಟೋರಿಕ್ಷಾ ಗಳಿಗೆ ಕಾನೂನಿನ ಪ್ರಕಾರ ಅನುಮತಿ ಇರುವ ಪ್ಲ್ಲಾಗ್ ಮೀಟರ್‌ನ್ನು ಕಡ್ಡಾಯ ವಾಗಿ ಅಳವಡಿಸಿಕೊಂಡು ಮೇಲಿನ ದರಕ್ಕೆ ಅನುಗುಣವಾಗಿ ಕಾನೂನು ಮಾಪನ ಶಾಸ್ತ್ರ ಇಲಾಖೆಯಿಂದ ಮಾ.31ರ ಒಳಗೆ ಕಡ್ಡಾಯ ವಾಗಿ ರಿಕ್ಷಾ ಲೀಬರೇಷನ್ ಹಾಗೂ ಸೀಲ್ ಮಾಡಿಸಿಕೊಂಡು ಎಪ್ರಿಲ್ 1 ರಿಂದ ಪ್ರಯಾಣಕ್ಕೆ ತಕ್ಕಂತೆ ಪರಿಷ್ಕರಿಸಿದ ಮೀಟರ್ ದರವನ್ನು ಪ್ರಯಾಣಿಕ ರಿಂದ ಪಡೆಯಬೇಕು. ತಪ್ಪಿದಲ್ಲಿ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ
ಜಿಲ್ಲೆಯಲ್ಲಿ 2014ರಲ್ಲಿ ಆಟೋ ಪ್ರಯಾಣ ಪರಿಷ್ಕರಿಸಿದ ನಂತರ ದರ ಪರಿಷ್ಕರಣೆ ಆಗಿಲ್ಲ. ವಾಹನದ ವಿಮೆ, ಬಿಡಿಭಾಗ ಹೆಚ್ಚಳವಾಗಿದ್ದು, ಆಟೋ ಪ್ರಯಾಣದ ದರವನ್ನು ಹೆಚ್ಚಿಸುವಂತೆ ಆಟೋ ಚಾಲಕ ಸಂಘಟನೆಗಳ ಮುಖಂಡರು ಮತ್ತು ಚಾಲರು ಸಭೆಯಲ್ಲಿ ಮನವಿ ಮಾಡಿದರು.ಈ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಕಡ್ಡಾಯವಾಗಿ ಎಲ್ಲಾ ಆಟೋ ಗಳಲ್ಲಿ ಮೀಟರ್ ಅಳವಡಿಸಿ, ಆ ಪ್ರಕಾರವೇ ಪ್ರಯಾಣಿಕರಿಂದ ದರ ಪಡೆಯುವಂತೆ ಚಾಲಕರಿಗೆ ಸೂಚಿಸಿದರು. ಆಟೋ ಚಾಲಕರು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಿ ಹಾಗೂ ಕಡ್ಡಾಯವಾಗಿ ಸಂಚಾರಿ ನಿಯಮಗಳ ಪಾಲನೆ ಮಾಡಬೇಕು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಿರುದ್ದ ದಿಕ್ಕಿನಿಂದ ಬರಬಾರದು. ಆಟೋಗಳಲ್ಲಿ ನಿಗದಿತ ಸಂಖ್ಯೆಯ ಪ್ರಯಾಣಿಕರನ್ನು ಮಾತ್ರ ಸಾಗಿಸಬೇಕು. ಶಾಲಾ ಮಕ್ಕಳನ್ನು ಕರೆದೊಯ್ಯುವಾಗ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡ ಬೇಕು ಎಂದು ಅವರು ಸೂಚಿಸಿದರು. ಆಟೋರಿಕ್ಷಾಗಳ ವಲಯ ನಿಗದಿ ಕುರಿತಂತೆ ಇರುವ ಗೊಂದಲಗಳ ಕುರಿತಂತೆ ಪ್ರತ್ಯೇಕ ಸಭೆ ಕರೆದು ಚರ್ಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್, ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಮಕೃಷ್ಣ ರೈ ಹಾಗೂ ವಿವಿಧ ರಿಕ್ಷಾ ಸಂಘಟನೆಗಳ ಮುಖಂಡರು ಹಾಗೂ ಆಟೋ ಚಾಲಕರು ಉಪಸ್ಥಿತರಿದ್ದರು.