ಏಪ್ರಿಲ್ 26 ರಂದು ರಾಜ್ಯ ಸರಕಾರದಿಂದ ಸಾಮೂಹಿಕ ‘ಸಪ್ತಪದಿ’

0

ಬೆಂಗಳೂರು : ರಾಜ್ಯ ಸರಕಾರ ಉದ್ದೇಶಿಸಿರೋ ಮೊದಲ ಹಂತದ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮ ಎಪ್ರಿಲ್ 26 ರಂದು ನಡೆಯಲಿದೆ. ಕಾರ್ಯಕ್ರಮದ ಪ್ರಚಾರಕ್ಕೆ 10 ದೇವಾಲಯಗಳಿಂದ ಪ್ರಚಾರ ರಥಗಳನ್ನು ಸಿದ್ದ ಪಡಿಸಲಾಗಿದೆ ಎಂದು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಾಮೂಹಿಕ ವಿವಾಹದ ಬಗ್ಗೆ ಜನರಿಗೆ ಮಾಹಿತಿಯನ್ನು ನೀಡುವ ನಿಟ್ಟಿನಲ್ಲಿ ಟೋಲ್ ಫ್ರೀ 18002456654 ದೂರವಾಣಿ ಕೇಂದ್ರ ಸ್ಥಾಪಿಸಲಾಗಿದೆ. ಗದಗ, ಹಾವೇರಿ, ಧಾರವಾಡ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಎ ದರ್ಜೆಯ ದೇವಾಲಯಗಳಿಲ್ಲ, ಹೀಗಾಗಿ ಬಿ ಮತ್ತು ಸಿ ದರ್ಜೆಯ ದೇವಾಲಯಗಳಲ್ಲೇ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ‌. ರಾಜ್ಯದ ಆಯ್ದ 100 ಮುಜರಾಯಿ ದೇವಾಲಯಗಳಲ್ಲಿಯೂ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯ ನಡೆಯುತ್ತದೆ. ಕಾರ್ಯಕ್ರಮ ಉಸ್ತುವಾರಿಯನ್ನು ನೋಡಿಕೊಳ್ಳಲು ಶೀಘ್ರದಲ್ಲಿಯೇ ನೋಡೆಲ್ ಅಧಿಕಾರಿ ನೇಮಕ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ವಸ್ತ್ರಸಂಹಿತೆ ಬಗ್ಗೆ ಶೀಘ್ರ ತೀರ್ಮಾನ
ಮುಜರಾಯಿ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸುವಂತೆ ಕೆಲವು ಸಂಘಟನೆಗಳು ಮನವಿ ಮಾಡಿವೆ. ಇದರ ಬಗ್ಗೆ ಧಾರ್ಮಿಕ ಪರಿಷತ್‌ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಪ್ರೋತ್ಸಾಹ ಧನ ಹಂಚಿಕೆ
ಕಂದಾಯ ಇಲಾಖೆಯಲ್ಲಿ ಆದರ್ಶ ವಿವಾಹ ಎಂಬ ಯೋಜನೆ ಜಾರಿಯಲ್ಲಿದ್ದು, ವಧುವಿನ ಹೆಸರಲ್ಲಿ 10.000 ರೂಪಾಯಿ ಬಾಂಡ್ ವಿತರಿಸಲಾಗುತ್ತದೆ. ಈ ಯೋಜನೆಯನ್ನು ಸಹ ಸಪ್ತಪದಿ ಕಾರ್ಯಕ್ರಮಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತದೆ. ಈ ಯೋಜನೆಯಡಿ 2 ಕೋಟಿ ರೂಪಾಯಿ ಬಳಕೆಯಾಗದೆ ಬಾಕಿ ಉಳಿದಿದೆ. ಇದರಲ್ಲಿ ವಧುಗಳಿಗೆ ಬಾಂಡ್ ಕೊಡುವುದರ ಜೊತೆಗೆ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವ ಎಸ್ ಸಿ, ಮತ್ತು ಎಸ್ ಟಿ ದಂಪತಿಗಳಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ 50.000 ರೂಪಾಯಿ ಪ್ರೋತ್ಸಾಹ ಧನ ನಗದು ಹಣವನ್ನು ಹಂಚಿಕೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ತಿರುಪತಿಯಲ್ಲಿ ಹೊಸ ಕರ್ನಾಟಕ ಭವನ ನಿರ್ಮಾಣ
ತಿರುಪತಿಯ ರಾಜ್ಯದ ನಿವೇಶನದಲ್ಲಿ 100 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಕರ್ನಾಟಕ ಭವನ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ‌. ಮುಜರಾಯಿ ಇಲಾಖೆ ಆಯುಕ್ತರಾದ ರೋಹಿಣಿ ಸಿಂಧೂರಿ ಹಾಗೂ ಹಿರಿಯ ಅಧಿಕಾರಿ ವರಪ್ರಸಾದ ರೆಡ್ಡಿಯವರನ್ನು ನೊಡಲ್ ಅಧಿಕಾರಿಗಳಾಗಿ ನೇಮಕ ಮಾಡಲಾಗಿದೆ ಎಂದು ಪೂಜಾರಿ ಅವರು ತಿಳಿಸಿದ್ದಾರೆ.
ಯಾತ್ರಾರ್ಥಿಗಳಿಗೆ ಸಹಾಯಧನ ಬಿಡುಗಡೆ
ಚಾರ್ ದಾಮ್ ಯಾತ್ರೆ ಕೈಗೊಂಡಿರುವ 3044 ಯಾತ್ರಿಕರಿಗೆ ತಲಾ 20.000 ರೂಪಾಯಿ ಹಾಗೂ ಮಾನಸ ಸರೋವರ ಯಾತ್ರೆ ಕೈಗೊಂಡ 1300 ಯಾತ್ರಿಕರಿಗೆ ತಲಾ 30.000ರೂಪಾಯಿ ಸಹಾಯಧನ ಬಿಡುಗಡೆ ಮಾಡಲಾಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಅವರು ವಿವರಣೆ ನೀಡಿದ್ದಾರೆ.

Leave A Reply

Your email address will not be published.