ಫೆ. 13ಕ್ಕೆ ಕರ್ನಾಟಕ ಬಂದ್ : ಸರಕಾರದ ವಿರುದ್ದ ಸಿಡಿದೆದ್ದ ಕನ್ನಡಿಗರು

0

ಬೆಂಗಳೂರು : ರಾಜ್ಯದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಹೆಚ್ಚಿನ ಅವಕಾಶವನ್ನು ಕಲ್ಪಿಸುವ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸಲು ಆಗ್ರಹಿಸಿ ವಿವಿಧ ಕನ್ನಡಪರ ಸಂಘಟನೆಗಳು ಫೆಬ್ರವರಿ 13 ರಂದು ಕರ್ನಾಟಕ ಬಂದ್ ಗೆ ಕರೆ ನೀಡಿವೆ.
ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರವು ಕರ್ನಾಟಕದಲ್ಲಿ ಕನ್ನಡಿಗರಿಗೆ ಎಷ್ಟು ಪ್ರಾಶಸ್ತ್ಯ ಸಿಗಬೇಕೆಂದು ಅರಿಯುವ ಕುರಿತು 1983ರಲ್ಲಿ ಮಾಜಿ ಕೇಂದ್ರ ಸಚಿವೆ ಸರೋಜಿನಿ ಮಹಿಷಿ ನೇತೃತ್ವದ ಸಮಿತಿಯೊಂದನ್ನು ರಚಿಸಿತ್ತು. ಗೋಪಾಲಕೃಷ್ಣ ಅಡಿಗ ಮೊದಲಾದ 4 ಮಂದಿ ಇದ್ದ ಈ ಸಮಿತಿ 1986ರಲ್ಲಿ ಅಂತಿಮ ವರದಿ ಸಲ್ಲಿಸಿತ್ತು. ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಸಮಿತಿಯು ಒಟ್ಟು 58 ಶಿಫಾರಸುಗಳನ್ನು ಮಾಡಿತ್ತು. ಇದರಲ್ಲಿ ರಾಜ್ಯ ಸರ್ಕಾರ 40 ಶಿಫಾರಸುಗಳನ್ನು ಒಪ್ಪಿಕೊಂಡಿದೆ. ಉಳಿದ ಹಲವು ಪ್ರಮುಖ ಶಿಫಾರಸುಗಳು ಇನ್ನೂ ಗಗನಕುಸುಮವಾಗಿಯೇ ಉಳಿದಿವೆ.ರಾಜ್ಯದ ಸರ್ಕಾರಿ ಉದ್ಯೋಗದಲ್ಲಿ ಕನ್ನಡಿಗರಿಗೆ ಶೇ. 100ರಷ್ಟು ಮೀಸಲಾತಿ ಕೊಡಬೇಕು. ಖಾಸಗಿ ಕಂಪನಿಗಳಲ್ಲೂ ಮೀಸಲಾತಿ ನಿರ್ದಿಷ್ಟಪಡಿಸಿ ಈ ವರದಿ ಶಿಫಾರಸುಗಳನ್ನು ಮಾಡಿದೆ. ಸರೋಜಿನಿ ಮಹಿಷಿ ವರದಿಯನ್ನು ಸಂಪೂರ್ಣವಾಗಿ ಜಾರಿ ಮಾಡಬೇಕೆಂಬುದು ದಶಕಗಳಿಂದ ಕನ್ನಡ ಸಂಘಟನೆಗಳು ಹೋರಾಟ ಮಾಡಿಕೊಂಡು ಬಂದಿವೆ. ಇನ್ನು, ಯಡಿಯೂರಪ್ಪ ಸರ್ಕಾರ ರಾಜ್ಯದಲ್ಲಿ ಕನ್ನಡಿಗರಿಗೆ ಶೇ. 75ರಷ್ಟು ಉದ್ಯೋಗ ಮೀಸಲಾತಿ ಕೊಡುವ ಕಾನೂನು ಜಾರಿಗೊಳಿಸಲು ಚಿಂತನೆ ನಡೆಸಿದೆ.ಈ ಬೆನ್ನಲ್ಲೇ ಕನ್ನಡಪರ ಸಂಘಟನೆಗಳು ಬಂದ್ ಗೆ ಕರೆ ನೀಡಿವೆ.
ರಾಜ್ಯದ ಪ್ರತಿಯೊಬ್ಬರು ಕೂಡ ಸ್ವಯಂಪ್ರೇರಿತವಾಗಿ ಬಂದ್​ಗೆ ಸಹಕಾರ ನೀಡುವಂತೆ ಸಂಘಟನೆಗಳು ಮನವಿ ಮಾಡಿಕೊಂಡಿವೆ. ಕನ್ನಡ ಚಳವಳಿಯ ನಾಗೇಶ್ ನೇತೃತ್ವದಲ್ಲಿ 500ಕ್ಕೂ ಹೆಚ್ಚು ಸಂಘಟನೆಗಳು ಬಂದ್​ಗೆ ಬೆಂಬಲ ನೀಡಿವೆ. ಜಯ ಕರ್ನಾಟಕ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಲಾರಿ ಮಾಲೀಕರ ಸಂಘ, ಸಿಐಟಿಯು ಮೊದಲಾದ ಸಂಘಟನೆಗಳೂ ಫೆ. 13ರ ಬಂದ್​ಗೆ ಬೆಂಬಲ ಸೂಚಿಸಿವೆ. ಸರೋಜಿನಿ ಮಹಿಷಿ ಸಮಿತಿಯ ವರದಿ ವಿಚಾರದಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರುತ್ತಿದ್ದು,ತತ್​ಕ್ಷಣವೇ ವರದಿ ಅನುಷ್ಠಾನ ಮಾಡಬೇಕೆಂದು ಕನ್ನಡಪರ ಸಂಘಟನೆಗಳು ಆಗ್ರಹಿಸಿವೆ.

Leave A Reply

Your email address will not be published.