ನವದೆಹಲಿ : ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರೋ ಬೆನ್ನಲ್ಲೇ ದೆಹಲಿಯ ಅಲಾಮಿ ಮಾರ್ಕಸ್ ಮಸೀದಿ ಆತಂಕವನ್ನು ತಂದೊಡ್ಡಿದೆ. ಮಸೀದಿಯಲ್ಲಿ ನಡೆದಿದ್ದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಕೆಲವರು ಕೊರೊನಾಕ್ಕೆ ಬಲಿಯಾಗಿದ್ರೆ, ಹಲವರಿಗೆ ಸೋಕು ಕಾಣಿಸಿಕೊಂಡಿದೆ. ಸರಕಾರದ ಆದೇಶವನ್ನು ಧಿಕ್ಕರಿಸಿ ಮಾರ್ಚ್ 28ರ ವರೆಗೆ ಮಸೀದಿಯಲ್ಲಿ ಧಾರ್ಮಿಕ ಸಭೆ ನಡೆದಿದ್ದು, 2,500ಕ್ಕೂ ಅಧಿಕ ಮಂದಿ ಧಾರ್ಮಿಕಸಭೆಯಲ್ಲಿ ಪಾಲ್ಗೊಂಡಿದ್ದಾರೆ ಅನ್ನೋ ಮಾಹಿತಿ ಬಯಲಾಗಿದ್ದು, ಸಭೆಯಲ್ಲಿ ಪಾಲ್ಗೊಂಡಿದ್ದವರಿಗಾಗಿ ಹುಡುಕಾಟ ಶುರುವಾಗಿದೆ.

ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ದೇಶದಾದ್ಯಂತ ಮಾರ್ಚ್ 24ರಂದು ಪ್ರಧಾನಿ ನರೇಂದ್ರ ಮೋದಿ ಲಾಕ್ ಡೌನ್ ಆದೇಶ ಹೊರಡಿಸಿದ್ದರು. ಆಲ್ಲದೇ ಮಾರ್ಚ್ 23ರಂದು ದೆಹಲಿಯ ಪೊಲೀಸರು ಮಸೀದಿಯಲ್ಲಿ ಯಾವುದೇ ಕಾರಣಕ್ಕೂ ಧಾರ್ಮಿಕಸಭೆ ನಡೆಸಬಾರದು ಅಂತಾ ಕಟ್ಟಪ್ಪಣೆಯನ್ನು ಹೊರಡಿಸಿದ್ದರು. ಆದರೆ ಸರಕಾರದ ಆದೇಶವನ್ನೇ ಧಿಕ್ಕರಿಸಿ ಅಲಾಮಿ ಮಾರ್ಕಸ್ ಮಸೀದಿಯಲ್ಲಿ ಧಾರ್ಮಿಕಸಭೆಯನ್ನು ನಡೆಸಲಾಗಿತ್ತು.

ಧಾರ್ಮಿಕಸಭೆಯಲ್ಲಿ ಪಾಲ್ಗೊಂಡಿದ್ದ ತುಮಕೂರಿನ ಶಿರಾದ ವೃದ್ದನೋರ್ವ ಸಾವನ್ನಪ್ಪಿದ್ದ. ನಂತರದಲ್ಲಿ ಎಚ್ಚೆತ್ತುಕೊಂಡ ದೆಹಲಿ ಸರಕಾರ ಮಸೀದಿಯಲ್ಲಿರುವ 1,800 ಮಂದಿ ಮಸೀದಿಯನ್ನು ತೊರೆಯುವಂತೆಯೂ ಸೂಚಿಸಿತ್ತು. ಆದರೆ ಮಸೀದಿಯ ಮುಖ್ಯಸ್ಥ ಮೌಲಾನಾ ಸಾದ್ ಒಪ್ಪದೇ ಇದ್ದಾಗ ಕೇಂದ್ರ ಗೃಹ ಇಲಾಖೆಗೆ ದೆಹಲಿ ಸರಕಾರ ಮನವಿ ಮಾಡಿಕೊಂಡಿತ್ತು.

ಈ ಹಿನ್ನೆಲೆಯಲ್ಲಿ ಅಮೀತ್ ಶಾ ಮಸೀದಿ ತೆರವು ಮಾಡುವಂತೆ ಆದೇಶ ಮಾಡಿದ್ದರು. ಆದರೆ ಮಸೀದಿಯಲ್ಲಿರುವರ 1800 ಮಂದಿಯನ್ನು ತೆರವುಗೊಳಿಸುವ ನೇತೃತ್ವವನ್ನು ವಹಿಸಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ರಕ್ಷಣಾ ಸಲಹೆಗಾರ ಅಜಿತ್ ದೋವಲ್.

ಗೃಹ ಸಚಿವ ಅಮಿತ್ ಶಾ ಆದೇಶದ ಮೇರೆಗೆ ಮಾರ್ಚ್ 28ರಂದು ಮಧ್ಯರಾತ್ರಿ 2 ಗಂಟೆಗೆ ಅಲಾಮಿ ಮಾರ್ಕಸ್ ಮಸೀದಿಯ ಬಳಿಗೆ ಬಂದಿದ್ದ ಅಜಿತ್ ದೋವಲ್ ಮಸೀದಿಯಲ್ಲಿರುವವರನ್ನು ಖಾಲಿ ಮಾಡಿಸುವಂತೆ ಮಸೀದಿ ಮುಖ್ಯಸ್ಥ ಮೌಲಾನಾ ಸಾದ್ ಗೆ ಮನವಿ ಮಾಡಿದ್ದರು. ಆದರೆ ಇದಕ್ಕೆ ಒಪ್ಪದೇ ಇದ್ದಾಗ ಬಲವಂತವಾಗಿ ಮಸೀದಿಯಲ್ಲಿದ್ದ 1,800 ಜನರನ್ನು ತೆರವುಗೊಳಿಸಲಾಗಿದೆ. ಮಸೀದಿಯಲ್ಲಿ ವಾಸ್ತವ್ಯ ಹೂಡಿದ್ದ 118 ಜನರಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ.

ಮಾತ್ರವಲ್ಲ ಮಸೀದಿ ಸುತ್ತಮುತ್ತಲಿನ ಸುಮಾರು 300ಕ್ಕೂ ಅಧಿಕ ಮಂದಿಗೆ ಶಂಕಿತ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಪ್ಯಾರಾ ಮಿಲಿಟರಿ ಪೋರ್ಸ್ ನ್ನು ಭದ್ರತೆಗೆ ನಿಯೋಜಿಸಲಾಗಿದೆ. ಅಲಾಮಿ ಮಾರ್ಕಸ್ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಕರ್ನಾಟಕದ ಸುಮಾರು 300 ಮಂದಿ ಪಾಲ್ಗೊಂಡಿದ್ದಾರೆ ಅನ್ನೊ ಮಾಹಿತಿ ಲಭ್ಯವಾಗಿದೆ. ಈ ನಡುವಲ್ಲೇ ಮಸೀದಿಯ ಮುಖ್ಯಸ್ಥ ಮೌಲಾನಾ ಸೂದ್ ನಾಪತ್ತೆಯಾಗಿದ್ದು, ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.