ಬೆಂಗಳೂರು : ಕೊರೊನಾ ವೈರಸ್ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ವಿಧಿಸಲಾಗಿರುವ ಲಾಕ್ ಡೌನ್ ಆದೇಶವನ್ನು ರಾಜ್ಯ ಸರಕಾರ ಸಡಿಲ ಮಾಡಿದೆ. ಎಪ್ರಿಲ್ 20 ರಿಂದ ದ್ವಿಚಕ್ರ ಓಡಾಟಕ್ಕೆ ಮುಕ್ತ ಅವಕಾಶವನ್ನು ಕಲ್ಪಿಸಿದೆ. ಅಲ್ಲದೇ ಐಟಿ – ಬಿಟಿ ಕಂಪೆನಿಗಳ ಶೇ.30 ರಷ್ಟು ಉದ್ಯೋಗಿಗಳು ಕಚೇರಿಗೆ ತೆರಳಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಿದೆ.

ಲಾಕ್ ಡೌನ್ ಆದೇಶ ಸಡಿಲಗೊಳಿಸುವ ಕುರಿತು ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನಂತರ ಸುದ್ದಿಗೋಷ್ಠಿ ನಡೆಸಿದರು. ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ ಮೊನ್ನೆ 36, ನಿನ್ನೆ 44 ಹಾಗೂ ಇಂದು 12 ಕೊರೊನಾ ಪ್ರಕರಣಗಳು ಮಾತ್ರವೇ ವರದಿಯಾಗಿದೆ. ಇದು ಸಮಾಧಾನಕರ ವಿಚಾರ. ಈ ಹಿನ್ನೆಲೆಯಲ್ಲಿಯೇ ನಗರದ ಕಂಟೈನ್ಮೆಂಟ್ ಪ್ರದೇಶಗಳನ್ನು ಹೊರತು ಪಡಿಸಿ ಉಳಿದ ಪ್ರದೇಶಗಳಲ್ಲಿ ದ್ವಿಚಕ್ರ ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ ಎಂದಿದ್ದಾರೆ.

ಲಾಕ್ ಡೌನ್ ಸಡಿಲವಾದ್ರೂ ಕೂಡ ರಾಜ್ಯದಲ್ಲಿ ಮೇ 3ರ ವರೆಗೆ ನಿಷೇಧಾಜ್ಞೆ ಮುಂದುವರಿಯಲಿದೆ. ಬೆಂಗಳೂರು, ರಾಮನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಒಂದೇ ಜಿಲ್ಲೆಯೆಂದು ಪರಿಗಣಿಸಲಾಗಿದ್ದು, ಉಳಿದ ಜಿಲ್ಲೆಗಳಲ್ಲಿ ಅಂತರ್ಜಿಲ್ಲಾ ಓಡಾಟಕ್ಕೆ ಅವಕಾಶವನ್ನು ನಿಷೇಧಿಸಲಾಗಿದೆ.

ಇನ್ನು ಐಟಿ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಶೇ.30 ರಷ್ಟು ಉದ್ಯೋಗಿಗಳಿಗೆ ಯಾವುದೇ ಪಾಸ್ ಅಗತ್ಯವಿಲ್ಲ ಎಂದಿದ್ದಾರೆ.