ನವದೆಹಲಿ : ಕಳೆದೊಂದು ತಿಂಗಳಿನಿಂದಲೂ ಕೊರೊನಾದ್ದೇ ಭಯ. ಜನ ಮನೆಯಿಂದ ಹೊರ ಬರೋದಕ್ಕೂ ಭಯ ಪಡುತ್ತಿದ್ದಾರೆ. ನಮ್ಮ ಅಕ್ಕ ಪಕ್ಕದಲ್ಲಿ ಕೊರೊನಾ ಪೀಡಿತರಿದ್ದಾರಾ ಅನ್ನೋ ಆತಂಕವೂ ಕಾಡುತ್ತಿದೆ. ಆದರೆ ನಿಮ್ಮ ಹತ್ತಿರ ಕೊರೊನಾ ಸೋಂಕಿತರಿದ್ರೆ ಮಾಹಿತಿ ನೀಡುವ ಆ್ಯಪ್ ವೊಂದು ಬಿಡುಗಡೆಯಾಗಿದೆ.

ಕೊರೊನಾ ಮಹಾಮಾರಿಯನ್ನು ಮಟ್ಟಹಾಕುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ದೇಶದಾದ್ಯಂತ ಲಾಕ್ ಡೌನ್ ಜಾರಿ ಮಾಡೋದ್ರ ಜೊತೆಗೆ ಜನರಲ್ಲಿ ಕೊರೊನಾ ಕುರಿತು ಜನಜಾಗೃತಿಯನ್ನೂ ಮೂಡಿಸುತ್ತಿದೆ.

ಜನರಿಗೆ ಕೊರೊನಾ ಸೋಂಕಿನಿಂದ ರಕ್ಷಣೆಯನ್ನು ಪಡೆಯೋದಕ್ಕೆ ಕೇಂದ್ರ ಸರಕಾರ ಆ್ಯಪ್ ವೊಂದನ್ನು ಬಿಡುಗಡೆ ಮಾಡಿದೆ. ಆರೋಗ್ಯ ಸೇತು ಹೆಸರಿನ ಈ ಆ್ಯಪ್ ಹಿಂದಿ, ಇಂಗ್ಲೀಷ್ ಸೇರಿದಂತೆ ಇತರೇ 11 ಭಾಷೆಗಳಲ್ಲಿ ಕಾರ್ಯನಿರ್ವಹಿಸಲಿದೆ.

ಪ್ಲೇ ಸ್ಟೋರ್ ನಿಂದ ಉಚಿತವಾಗಿ ಈಗಾಗಲೇ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

ಆರೋಗ್ಯ ಸೇತು ಆ್ಯಪ್ ಪ್ರಮುಖವಾಗಿ ಕೊರೊನಾ ವೈರಸ್ ಸೋಂಕಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಒದಗಿಸುತ್ತದೆ. ಸೋಂಕಿತ ಮಾಹಿತಿಯನ್ನು ದಾಖಲಿಸಿಕೊಂಡ ನಂತರದಲ್ಲಿ ನಿಮ್ಮ ಹತ್ತಿರ ಸೋಂಕಿತ ಇದ್ದರೆ, ಆ್ಯಪ್ ನಿಮಗೆ ಸಂದೇಶವನ್ನು ನೀಡುತ್ತದೆ.

ಅಷ್ಟೇ ಅಲ್ಲಾ ಸೋಂಕಿತ ಇರುವ ಪ್ರದೇಶಕ್ಕೆ ತೆರಳಿದ್ರೂ ನಿಮಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸುತ್ತದೆ. ಯಾರಿಗಾದ್ರೂ ಸೋಂಕು ತಗಲಿದ್ರೆ, ಅವರ ಮೊಬೈಲ್ ಸಂಖ್ಯೆಯನ್ನು ಆ್ಯಪ್ ನಲ್ಲಿ ಆರೋಗ್ಯ ಸಚಿವಾಲಯ ಅಪ್ಡೇಟ್ ಮಾಡಲಿದೆ.

ಕೊರೊನಾ ವಿರುದ್ದ ಸಮರ ಸಾರಿರೋ ಕೇಂದ್ರ ಸರಕಾರ ಇದೀಗ ಡಿಜಿಟಲ್ ತಂತ್ರಜ್ಞಾನದ ಮೂಲಕ ಕೊರೊನಾ ನಿಯಂತ್ರಣಕ್ಕೆ ಪಣತೊಟ್ಟಿದೆ.