ಕೋಲಾರ : ಶಾಲಾ ಮಕ್ಕಳಲ್ಲಿ ಹೆಚ್ಚುತ್ತಿರುವ ದೃಷ್ಟಿ ದೋಷ ನಿವಾರಿಸುವ ನಿಟ್ಟಿನಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಎಲ್ಲಾ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ನೇತ್ರ ತಪಾಸನೆ ಮಾಡಿಸಲಾಗುವುದು ಎಂದು ಪ್ರೌಢ ಹಾಗೂ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಕೋಲಾರದಲ್ಲಿ ನಡೆದ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೆಲ ಮಕ್ಕಳು ಕೀಳರಿಮೆಯಿಂದ ದೃಷ್ಟಿ ಸಮಸ್ಯೆಯನ್ನು ಹೇಳಿಕೊಳ್ಳುತ್ತಿಲ್ಲ. ಇದು ಮಕ್ಕಳ ಶಿಕ್ಷಣದ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತಿದೆ. ಹೀಗಾಗಿ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಕಣ್ಣಿನ ಪರೀಕ್ಷೆ ಮಾಡಲಾಗುತ್ತದೆ. ಸಮಸ್ಯೆ ಕಂಡು ಬಂದ ಮಕ್ಕಳಿಗೆ ಸೂಕ್ತ ಚಿಕಿತ್ಸೆಯನ್ನು ಕೊಡಿಸಲಾಗುತ್ತದೆ. ಈ ಕುರಿತು ಆಯಾಯಾ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕೆಂದು ಅವರು ಸೂಚನೆ ನೀಡಿದ್ದಾರೆ.