‘ವಿಮೆ’ ದುರಾಸೆಗೆ ಮತ್ತೊಂದು ಬಲಿ: ಮಗಳ ಕೃತ್ಯಕ್ಕೆ ಬೇಸತ್ತು ತಾಯಿ ಆತ್ಮಹತ್ಯೆ; ಒಂದೇ ಕುಟುಂಬದಲ್ಲಿ ಘನಘೋರ ದುರಂತ!

ಮಗಳ ಕ್ರೂರ ದ್ರೋಹವನ್ನು ಸಹಿಸಲಾರದೆ, ಆಕೆಯ ಹೆತ್ತ ತಾಯಿ ನೇಣಿಗೆ ಶರಣಾಗಿರುವ ಘಟನೆ ಬೆಳಗಾವಿಯ ಯಮಕನಮರಡಿಯಲ್ಲಿ ಸಂಭವಿಸಿದೆ.

ಕೋಟಿ ಕೋಟಿ ವಿಮೆ ಹಣದ ಆಸೆಗೆ ಬಿದ್ದು ಪತಿಯನ್ನೇ ಕೊಂದ ಮಗಳ ಕ್ರೂರ ದ್ರೋಹವನ್ನು ಸಹಿಸಲಾರದೆ, ಆಕೆಯ ಹೆತ್ತ ತಾಯಿ ನೇಣಿಗೆ ಶರಣಾಗಿರುವ ಅತ್ಯಂತ ಆಘಾತಕಾರಿ ಘಟನೆ ಬೆಳಗಾವಿಯ ಯಮಕನಮರಡಿಯಲ್ಲಿ ಸಂಭವಿಸಿದೆ. ಮಾಜಿ ಸೈನಿಕ ಸಂದೀಪ್ ಮಂಜರಗಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾದ ಸುಮಾ ಮಂಜರಗಿಯ ತಾಯಿ 57 ವರ್ಷದ ಮಹಾದೇವಿ ಬದಾಮಿ ಅವರೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾರೆ. ಸ್ವಂತ ಮಗಳು ಹಣಕ್ಕಾಗಿ ಅಳಿಯನನ್ನು ಕೊಂದ ವಿಷಯ ಸಮಾಜದಲ್ಲಿ ತೀವ್ರ ಅವಮಾನ ತಂದಿದ್ದರಿಂದ ಮನನೊಂದು ಅವರು ಈ ನಿರ್ಧಾರ ಕೈಗೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಬೈಕ್ ಅಪಘಾತದಿಂದ ಸಣ್ಣಪುಟ್ಟ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಸೈನಿಕ ಸಂದೀಪ್ ಅವರನ್ನು, ಅವರ ಪತ್ನಿ ಸುಮಾ ಮತ್ತು ಆಕೆಯ ಪ್ರಿಯಕರ ಪುಂಡಲೀಕ ಸೇರಿ ಆಸ್ಪತ್ರೆಯ ಸಲೈನ್ ಬಾಟಲಿಗೆ ವಿಷ ಬೆರೆಸಿ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ್ದರು. ಸಂದೀಪ್ ಹೆಸರಲ್ಲಿದ್ದ ಎರಡು ಕೋಟಿ ರೂಪಾಯಿ ಜೀವ ವಿಮೆ ಹಣವನ್ನು ಪಡೆಯಲು ಈ ಸಂಚು ರೂಪಿಸಲಾಗಿತ್ತು. ಈ ಕೊಲೆಯನ್ನು ಕೇವಲ ಸಾಮಾನ್ಯ ಅಪಘಾತದ ಸಾವು ಎಂದು ಬಿಂಬಿಸಲು ಮತ್ತು ಮರಣೋತ್ತರ ಪರೀಕ್ಷೆಯ ವರದಿಯನ್ನು ಬದಲಿಸಲು ವಿಧಿವಿಜ್ಞಾನ ಸಿಬ್ಬಂದಿಗೆ 3 ಲಕ್ಷಕ್ಕೂ ಅಧಿಕ ಲಂಚ ನೀಡಲಾಗಿತ್ತು.‌

ಇದನ್ನೂ ಓದಿ : ವಾಹನ ಸವಾರರೇ ಗಮನಿಸಿ… ಟ್ರಾಫಿಕ್ ದಂಡ ಪಾವತಿಸುವವರಿಗೆ ಬಂಪರ್ ಆಫರ್: ಇಂದಿನಿಂದಲೇ ಶೇ. 50 ರಿಯಾಯಿತಿ ಅನ್ವಯ!

ಆದರೆ, ವಿಮೆ ಹಣ ಹಂಚಿಕೊಳ್ಳುವ ವಿಚಾರದಲ್ಲಿ ಸುಮಾ ಮತ್ತು ಆಕೆಯ ಪ್ರಿಯಕರನ ನಡುವೆ ಭಿನ್ನಾಭಿಪ್ರಾಯ ಮೂಡಿ, ಪ್ರಿಯಕರ ಪುಂಡಲೀಕನು ವಾಟ್ಸಪ್‌ನಲ್ಲಿ ಹಾಕಿದ ವಿಚಿತ್ರ ಸ್ಟೇಟಸ್‌ನಿಂದ ಪೊಲೀಸರಿಗೆ ಅನುಮಾನ ಬಂದಿತ್ತು. ತಕ್ಷಣ ಪೊಲೀಸರು ಕಾರ್ಯಾಚರಣೆ ನಡೆಸಿ ಇಡೀ ಕರಾಳ ರಹಸ್ಯವನ್ನು ಬಯಲಿಗೆಳೆದು, ಜೂನ್ 14ರಂದು ಪತ್ನಿ ಸುಮಾ ಸೇರಿದಂತೆ ಒಂಬತ್ತು ಜನ ಆರೋಪಿಗಳನ್ನು ಬಂಧಿಸಿದ್ದರು. ಮಗಳ ಬಂಧನದ ಬೆನ್ನಲ್ಲೇ ತೀವ್ರ ಅಪಮಾನ ಎದುರಿಸುತ್ತಿದ್ದ ತಾಯಿ ಮಹಾದೇವಿ ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಯಮಕನಮರಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.