*ಮಳೆ ಅಬ್ಬರ ಹೆಚ್ಚಳ; ಹಲವು ಜಿಲ್ಲೆಗಳ ಶಾಲೆಗಳಿಗೆ ರಜೆ ಘೋಷಣೆ! ಇಲ್ಲಿದೆ ಜಿಲ್ಲೆಗಳ ಪಟ್ಟಿ

ಮುಂಗಾರು ಮಳೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳ ಆಯ್ದ ತಾಲೂಕುಗಳಲ್ಲಿ ಶಾಲೆ ಮತ್ತು ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ. ವಿದ್ಯಾರ್ಥಿಗಳ ಸುರಕ್ಷತೆಗೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.

ರಾಜ್ಯದಲ್ಲಿ ಮುಂಗಾರು ಮಳೆ ಬಿರುಸುಗೊಂಡಿರುವ ಹಿನ್ನೆಲೆಯಲ್ಲಿ ಹಲವು ಜಿಲ್ಲೆಗಳ ಜಿಲ್ಲಾಡಳಿತಗಳು ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆ ಹಾಗೂ ಕಾಲೇಜುಗಳಿಗೆ ರಜೆ ಘೋಷಿಸಿವೆ. ನಿರಂತರ ಮಳೆ, ಬಿರುಗಾಳಿ ಮತ್ತು ಪ್ರವಾಹದ ಭೀತಿಯನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ.

ಚಿಕ್ಕಮಗಳೂರು ಜಿಲ್ಲೆ:
ಮಳೆಯ ತೀವ್ರತೆ ಹೆಚ್ಚಿರುವ ಕಾರಣ ಮೂಡಿಗೆರೆ, ಕೊಪ್ಪ ಹಾಗೂ ಎನ್.ಆರ್.ಪುರ ತಾಲೂಕುಗಳ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಶೃಂಗೇರಿ ತಾಲೂಕಿನ ಎಲ್ಲಾ ಶಾಲೆಗಳು ಮತ್ತು ಕಾಲೇಜುಗಳಿಗೆ ರಜೆ ನೀಡಲಾಗಿದೆ. ಕಳಸ ತಾಲೂಕಿನ ಅಂಗನವಾಡಿ ಹಾಗೂ 1ರಿಂದ 7ನೇ ತರಗತಿವರೆಗಿನ ಶಾಲೆಗಳಿಗೆ ಮಾತ್ರ ರಜೆ ಅನ್ವಯವಾಗುತ್ತದೆ. ಚಿಕ್ಕಮಗಳೂರು ತಾಲೂಕಿನ ಜಾಗರ, ವಸ್ತಾರೆ, ಖಾಂಡ್ಯ, ಆಲ್ದೂರು ಮತ್ತು ಆವತಿ ಹೋಬಳಿಗಳ ಶಾಲೆಗಳಿಗೂ ರಜೆ ಘೋಷಿಸಲಾಗಿದೆ.

ಶಿವಮೊಗ್ಗ ಜಿಲ್ಲೆ:
ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ ತಾಲೂಕುಗಳ ವ್ಯಾಪ್ತಿಯ ಎಲ್ಲಾ ಶಾಲೆಗಳು ಹಾಗೂ ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ.

ಉತ್ತರ ಕನ್ನಡ ಜಿಲ್ಲೆ:
ನಿರಂತರ ಮಳೆಯ ಹಿನ್ನೆಲೆಯಲ್ಲಿ ಶಿರಸಿ, ಸಿದ್ದಾಪುರ, ಯಲ್ಲಾಪುರ, ಜೋಯಿಡಾ ಮತ್ತು ದಾಂಡೇಲಿ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.

ಹಾಸನ ಜಿಲ್ಲೆ:
ಸಕಲೇಶಪುರ ತಾಲೂಕಿನ ಅಂಗನವಾಡಿ, ಶಾಲೆಗಳು ಮತ್ತು ಕಾಲೇಜುಗಳಿಗೆ ಮಳೆಯ ಕಾರಣ ಇಂದು ರಜೆ ನೀಡಲಾಗಿದೆ.

ಬೆಳಗಾವಿ ಜಿಲ್ಲೆ:
ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಪ್ರವಾಹದ ಆತಂಕ ಎದುರಾಗಿದ್ದು, ಬೆಳಗಾವಿ ನಗರ ಹಾಗೂ ಖಾನಾಪುರ ತಾಲೂಕಿನ ಎಲ್ಲಾ ಶಾಲೆಗಳು ಮತ್ತು ಪಿಯು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಕಳೆದ ಕೆಲವು ದಿನಗಳಿಂದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಹಲವು ನದಿಗಳು ತುಂಬಿ ಹರಿಯುತ್ತಿವೆ. ಕೆಲವು ಕಡೆ ರಸ್ತೆಗಳಿಗೆ ಮರಗಳು ಉರುಳಿರುವ ಘಟನೆಗಳೂ ವರದಿಯಾಗಿವೆ. ಹವಾಮಾನ ಇಲಾಖೆ ಮುಂದಿನ ದಿನಗಳಲ್ಲೂ ಭಾರೀ ಮಳೆಯ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಇರಲು ಅಧಿಕಾರಿಗಳು ಮನವಿ ಮಾಡಿದ್ದಾರೆ.

Sai Teja | ಸಾಯಿತೇಜ

Sai Teja | ಸಾಯಿತೇಜ ಕಳೆದ 7 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿದ್ದಾರೆ. ಸಾಯಿತೇಜಾ ಅವರು, ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತಂತ್ರಜ್ಞಾನ ಹಾಗೂ ಬಿಸಿನೆಸ್, ಆಟೋಮೊಬೈಲ್‌ ಕ್ಷೇತ್ರದ ಪತ್ರಿಕೋದ್ಯಮದಲ್ಲಿ ಪರಿಣತಿಯನ್ನು ಹೊಂದಿದ್ದಾರೆ. ಆನ್‌ಲೈನ್‌ ಸುದ್ದಿ ಲೋಕದಲ್ಲಿ ಅಪಾರವಾದ ಜ್ಞಾನವನ್ನು ಹೊಂದಿದ್ದಾರೆ. ಕನ್ನಡ ನ್ಯೂಸ್‌ ನೆಕ್ಸ್ಟ್‌ನಲ್ಲಿ ಉಪ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. More »