ಪೆಟ್ರೋಲ್ ವೆಚ್ಚ ಕಡಿತಕ್ಕೆ ಹೊಸ ತಂತ್ರಜ್ಞಾನ! ಫ್ಲೆಕ್ಸ್ ಫ್ಯೂಯೆಲ್ ವ್ಯಾಗನ್‌ಆರ್ ಲಾಂಚ್

ಪೆಟ್ರೋಲ್ ವೆಚ್ಚ ಕಡಿತ ಹಾಗೂ ಪರಿಸರ ಸಂರಕ್ಷಣೆಗೆ ಉತ್ತೇಜನ ನೀಡುವ ಉದ್ದೇಶದಿಂದ ಮಾರೂತಿ ಸುಜುಕಿ ದೇಶದ ಮೊದಲ ಸಂಪೂರ್ಣ ಫ್ಲೆಕ್ಸ್ ಫ್ಯೂಯೆಲ್ ವ್ಯಾಗನ್‌ಆರ್ ಕಾರನ್ನು ಅಧಿಕೃತವಾಗಿ ಪರಿಚಯಿಸಿದೆ.

ಭಾರತದ ವಾಹನ ಮಾರುಕಟ್ಟೆಯಲ್ಲಿ ಹೊಸ ಅಧ್ಯಾಯ ಆರಂಭವಾಗಿದ್ದು, ಮಾರೂತಿ ಸುಜುಕಿ ತನ್ನ ಜನಪ್ರಿಯ ವ್ಯಾಗನ್‌ಆರ್ ಮಾದರಿಯನ್ನು ಫ್ಲೆಕ್ಸ್ ಫ್ಯೂಯೆಲ್ ತಂತ್ರಜ್ಞಾನದೊಂದಿಗೆ ಪರಿಚಯಿಸಿದೆ. ದೇಶದಲ್ಲೇ ಮೊದಲ ಸಂಪೂರ್ಣ ಫ್ಲೆಕ್ಸ್ ಫ್ಯೂಯೆಲ್ ಕಾರು ಎಂಬ ಹೆಗ್ಗಳಿಕೆಗೆ ಈ ವಾಹನ ಪಾತ್ರವಾಗಿದೆ.

ಈ ಹೊಸ ಕಾರಿನ ಪ್ರಮುಖ ವಿಶೇಷತೆ ಎಂದರೆ, ಇದು 20% ರಿಂದ 85% ರವರೆಗೆ ಎಥನಾಲ್ ಮಿಶ್ರಿತ ಪೆಟ್ರೋಲ್‌ನಲ್ಲಿ ಕಾರ್ಯನಿರ್ವಹಿಸಬಲ್ಲದು. ಇಂಧನದಲ್ಲಿರುವ ಎಥನಾಲ್ ಪ್ರಮಾಣಕ್ಕೆ ಅನುಗುಣವಾಗಿ ಎಂಜಿನ್ ತನ್ನ ಕಾರ್ಯಕ್ಷಮತೆಯನ್ನು ಸ್ವಯಂಚಾಲಿತವಾಗಿ ಹೊಂದಿಸಿಕೊಳ್ಳುವ ವ್ಯವಸ್ಥೆ ಹೊಂದಿದೆ.

ಭಾರತದಲ್ಲಿ ಹಸಿರು ಇಂಧನ ಬಳಕೆಯನ್ನು ಉತ್ತೇಜಿಸುವ ಕೇಂದ್ರ ಸರ್ಕಾರದ ಗುರಿಗೆ ಪೂರಕವಾಗಿ ಈ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ. ಸಾಂಪ್ರದಾಯಿಕ ಪೆಟ್ರೋಲ್ ವಾಹನಗಳಿಗೆ ಹೋಲಿಸಿದರೆ ಹಸಿರುಮನೆ ಅನಿಲಗಳ ಹೊರಸೂಸುವಿಕೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುವ ಸಾಧ್ಯತೆ ಇದೆ.

ಹೊಸ ವ್ಯಾಗನ್‌ಆರ್ ಫ್ಲೆಕ್ಸ್ ಫ್ಯೂಯೆಲ್ ಮಾದರಿಯಲ್ಲಿ 1.2 ಲೀಟರ್ ನಾಲ್ಕು ಸಿಲಿಂಡರ್ ನ್ಯಾಚುರಲಿ ಆಸ್ಪಿರೇಟೆಡ್ ಎಂಜಿನ್ ಅಳವಡಿಸಲಾಗಿದೆ. ಇದಕ್ಕೆ 5-ಸ್ಪೀಡ್ ಮ್ಯಾನುಯಲ್ ಗೇರ್‌ಬಾಕ್ಸ್ ಜೋಡಿಸಲಾಗಿದ್ದು, ಎಥನಾಲ್ ಮಿಶ್ರಿತ ಇಂಧನವನ್ನು ಸುಲಭವಾಗಿ ಬಳಸುವಂತೆ ಹಲವು ತಾಂತ್ರಿಕ ಬದಲಾವಣೆಗಳನ್ನು ಮಾಡಲಾಗಿದೆ.

ಎಥನಾಲ್‌ನ ಪರಿಣಾಮದಿಂದ ಎಂಜಿನ್ ಭಾಗಗಳಿಗೆ ಹಾನಿಯಾಗದಂತೆ ಇಂಧನ ಪಂಪ್, ಇಂಜೆಕ್ಟರ್‌ಗಳು ಮತ್ತು ಎಂಜಿನ್ ಮ್ಯಾನೇಜ್‌ಮೆಂಟ್ ವ್ಯವಸ್ಥೆಯನ್ನು ವಿಶೇಷವಾಗಿ ಮರು ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಈ ಘೋಷಣೆಯ ಬಳಿಕ ಷೇರು ಮಾರುಕಟ್ಟೆಯಲ್ಲೂ ಮಾರೂತಿ ಸುಜುಕಿ ಗಮನ ಸೆಳೆದಿದೆ. ಕಂಪನಿಯ ಷೇರುಗಳು ಸುಮಾರು 1.5 ಶೇಕಡಾ ಏರಿಕೆ ಕಂಡಿದ್ದು, ಹೂಡಿಕೆದಾರರು ಈ ಹೊಸ ತಂತ್ರಜ್ಞಾನಕ್ಕೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.

ಎಥನಾಲ್ ಆಧಾರಿತ ಇಂಧನ ಬಳಕೆ ಹೆಚ್ಚಾದರೆ ಕಚ್ಚಾ ತೈಲ ಆಮದು ಮೇಲಿನ ಅವಲಂಬನೆ ಕಡಿಮೆಯಾಗುವ ಜೊತೆಗೆ, ವಾಹನ ಬಳಕೆದಾರರ ಇಂಧನ ವೆಚ್ಚವೂ ಭವಿಷ್ಯದಲ್ಲಿ ಇಳಿಕೆಯಾಗುವ ನಿರೀಕ್ಷೆಯಿದೆ. ಹಸಿರು ಸಾರಿಗೆ ವ್ಯವಸ್ಥೆಯತ್ತ ಭಾರತ ಸಾಗುತ್ತಿರುವ ಸಂದರ್ಭದಲ್ಲಿ ಈ ಕಾರು ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.

Exit mobile version