ಈಗ ಪ್ಯಾನ್ ಕಾರ್ಡ್ ಫೋಟೋ ಬದಲಾವಣೆಗೆ ಸರಳ ಅರ್ಜಿ ಪ್ರಕ್ರಿಯೆ! ಆನ್‌ಲೈನ್ ಮೂಲಕವೇ ಸಾಧ್ಯ

ಪ್ಯಾನ್ ಕಾರ್ಡ್‌ನಲ್ಲಿರುವ ಹಳೆಯ ಫೋಟೋವನ್ನು ಕೆಲವೇ ಹಂತಗಳಲ್ಲಿ ಆನ್‌ಲೈನ್ ಮೂಲಕ ಬದಲಾಯಿಸಬಹುದಾಗಿದ್ದು, ಸರಿಯಾದ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದರೆ ಪ್ರಕ್ರಿಯೆ ಸುಲಭವಾಗಿ ಪೂರ್ಣಗೊಳ್ಳುತ್ತದೆ.

ಆಧಾರ್ ಕಾರ್ಡ್ ನಂತರ ದೇಶದಲ್ಲಿ ಅತ್ಯಂತ ಪ್ರಮುಖ ಗುರುತಿನ ದಾಖಲೆಗಳಲ್ಲಿ ಪ್ಯಾನ್ ಕಾರ್ಡ್ ಕೂಡ ಒಂದು. ಬ್ಯಾಂಕ್ ಖಾತೆ ತೆರೆಯುವುದು, ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದು, ಹೂಡಿಕೆ ಮಾಡುವುದು ಹಾಗೂ ಆರ್ಥಿಕ ವ್ಯವಹಾರಗಳಿಗೆ ಪ್ಯಾನ್ ಕಾರ್ಡ್ ಅಗತ್ಯವಾಗಿರುತ್ತದೆ. ಆದ್ದರಿಂದ ಅದರಲ್ಲಿರುವ ಎಲ್ಲಾ ಮಾಹಿತಿಯೂ ಸರಿಯಾಗಿರುವುದು ಬಹಳ ಮುಖ್ಯ.

ಬಹುತೇಕರ ಪ್ಯಾನ್ ಕಾರ್ಡ್‌ನಲ್ಲಿ ಹಲವು ವರ್ಷಗಳ ಹಿಂದೆ ತೆಗೆದಿರುವ ಫೋಟೋ ಇರುತ್ತದೆ. ಕಾಲಕ್ರಮೇಣ ವ್ಯಕ್ತಿಯ ಮುಖಚಹರೆಯಲ್ಲಿ ಬದಲಾವಣೆ ಆಗುವುದು ಸಹಜ. ಇಂತಹ ಸಂದರ್ಭಗಳಲ್ಲಿ ಗುರುತಿನ ಪರಿಶೀಲನೆ ವೇಳೆ ಕೆಲವೊಮ್ಮೆ ತೊಂದರೆಗಳು ಎದುರಾಗಬಹುದು. ಹೀಗಾಗಿ ಪ್ಯಾನ್ ಕಾರ್ಡ್‌ನಲ್ಲಿರುವ ಫೋಟೋವನ್ನು ನವೀಕರಿಸಿಕೊಳ್ಳುವುದು ಉತ್ತಮ ಆಯ್ಕೆಯಾಗಿದೆ.

ಪ್ಯಾನ್ ಕಾರ್ಡ್‌ನಲ್ಲಿ ಹೆಸರು, ವಿಳಾಸ ಅಥವಾ ಇತರೆ ವಿವರಗಳಂತೆ ಫೋಟೋವನ್ನು ಸಹ ಆನ್‌ಲೈನ್ ಮೂಲಕ ಬದಲಾಯಿಸಬಹುದಾಗಿದೆ. ಈ ಪ್ರಕ್ರಿಯೆಯನ್ನು ಮನೆಯಿಂದಲೇ ಪೂರ್ಣಗೊಳಿಸಲು ಅವಕಾಶವಿದ್ದು, ಕೆಲವೇ ನಿಮಿಷಗಳಲ್ಲಿ ಅರ್ಜಿ ಸಲ್ಲಿಸಬಹುದು.

ಫೋಟೋ ಬದಲಾವಣೆಗಾಗಿ ಮೊದಲು ಎನ್‌ಎಸ್‌ಡಿಎಲ್ (NSDL) ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ನಂತರ ಅಗತ್ಯ ವೈಯಕ್ತಿಕ ಮಾಹಿತಿಗಳನ್ನು ಭರ್ತಿ ಮಾಡಿ, ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ ಹಾಗೂ ಇತರೆ ವಿವರಗಳನ್ನು ದಾಖಲಿಸಬೇಕು. ಕ್ಯಾಪ್ಚಾ ನಮೂದಿಸಿ ಅರ್ಜಿಯನ್ನು ಸಲ್ಲಿಸಿದ ಬಳಿಕ ಕೆವೈಸಿ (KYC) ಪ್ರಕ್ರಿಯೆ ಪೂರ್ಣಗೊಳಿಸಬೇಕು.

ಅನಂತರ ಫೋಟೋ ಅಪ್‌ಡೇಟ್ ಆಯ್ಕೆಯನ್ನು ಆರಿಸಿ, ಮಾನ್ಯ ಗುರುತಿನ ದಾಖಲೆಯನ್ನು ಅಪ್‌ಲೋಡ್ ಮಾಡಬೇಕು. ಘೋಷಣಾ ಪತ್ರವನ್ನು ದೃಢೀಕರಿಸಿದ ಬಳಿಕ ನಿಗದಿತ ಶುಲ್ಕವನ್ನು ಪಾವತಿಸಬೇಕು. ಪಾವತಿ ಬಳಿಕ ದೊರೆಯುವ ನೋಂದಣಿ ಸಂಖ್ಯೆಯನ್ನು ಸುರಕ್ಷಿತವಾಗಿ ಉಳಿಸಿಕೊಳ್ಳಬೇಕು.

ಅರ್ಜಿಯ ಪರಿಶೀಲನೆ ಪೂರ್ಣಗೊಂಡ ನಂತರ ಹೊಸ ಫೋಟೋವನ್ನು ಪ್ಯಾನ್ ಕಾರ್ಡ್ ದಾಖಲೆಯಲ್ಲಿ ನವೀಕರಿಸಲಾಗುತ್ತದೆ. ಪ್ಯಾನ್ ಕಾರ್ಡ್ ಮಾಹಿತಿಯನ್ನು ಸದಾ ನವೀಕರಿಸಿಕೊಂಡಿದ್ದರೆ ಭವಿಷ್ಯದಲ್ಲಿ ಯಾವುದೇ ಸೇವೆ ಪಡೆಯುವಾಗ ತೊಂದರೆ ಎದುರಾಗುವ ಸಾಧ್ಯತೆ ಕಡಿಮೆಯಾಗುತ್ತದೆ.

Exit mobile version