ಬೆಂಗಳೂರು: ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾ ವಿರುದ್ಧ ಕ್ರಿಕೆಟ್ ಅಭಿಮಾನಿಗಳ ಆಕ್ರೋಶ ಮತ್ತಷ್ಟು ತಾರಕಕ್ಕೇರಿದೆ. ಸತತ ಸೋಲುಗಳ ಬಳಿಕ ಬಿಸಿಸಿಐ ತಂಡದ ಪ್ರದರ್ಶನದ ಪರಾಮರ್ಶೆಗೆ ಮುಂದಾಗಿದ್ದರೆ, ಇತ್ತ ಸೋಶಿಯಲ್ ಮೀಡಿಯಾದಲ್ಲಿ 15ರ ಹರೆಯದ ಯುವ ಆಟಗಾರ ವೈಭವ್ ಸೂರ್ಯವಂಶಿ ವಿರುದ್ಧ ಅಭಿಮಾನಿಗಳು ತೀವ್ರ ಅಸಮಾಧಾನ ಹೊರಹಾಕುತ್ತಿದ್ದಾರೆ.
ನಾಲ್ಕೇ ತಿಂಗಳಲ್ಲಿ ವಿಶ್ವ ಚಾಂಪಿಯನ್ನರ ಜಾಗತಿಕ ಕುಸಿತ!
ಟಿ20 ವಿಶ್ವಕಪ್ ಗೆದ್ದು ಕೇವಲ ನಾಲ್ಕೇ ತಿಂಗಳಲ್ಲಿ ಟೀಂ ಇಂಡಿಯಾದ ಪ್ರದರ್ಶನ ಪಾತಾಳಕ್ಕೆ ಕುಸಿದಿರುವುದು ಬಿಸಿಸಿಐ ನಿದ್ದೆಗೆಡಿಸಿದೆ. ಮೊದಲು ಐರ್ಲೆಂಡ್ ವಿರುದ್ಧ, ಈಗ ಇಂಗ್ಲೆಂಡ್ ವಿರುದ್ಧ ಸರಣಿ ಸೋತಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ. ವಿಶ್ವ ಚಾಂಪಿಯನ್ನರು ಇಷ್ಟೊಂದು ಕಳಪೆ ತಂಡವಾಗಲು ಹೇಗೆ ಸಾಧ್ಯ ಎಂಬ ಪ್ರಶ್ನೆಗಳು ಎದುರಾಗಿದ್ದು, ಇದೀಗ ಇಂಗ್ಲೆಂಡ್ ಸರಣಿಯಲ್ಲಿ ಫ್ಲಾಪ್ ಆದ ವೈಭವ್ ಸೂರ್ಯವಂಶಿ ಅಭಿಮಾನಿಗಳ ಟಾರ್ಗೆಟ್ ಆಗಿದ್ದಾರೆ.
ಅಂದು ಅವಕಾಶ ಕೊಡಿ ಎಂದವರೇ ಇಂದು ಆಕ್ರೋಶ ಹೊರಹಾಕುತ್ತಿರುವುದೇಕೆ?
ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಬೆಂಚ್ ಕಾಯ್ದಿದ್ದ ವೈಭವ್ಗೆ ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಡೆಬ್ಯೂ ಮಾಡಲು ಅವಕಾಶ ನೀಡಲಾಗಿತ್ತು. ಆದರೆ, ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಯುವ ಆಟಗಾರ ಸಂಪೂರ್ಣ ವಿಫಲರಾಗಿದ್ದಾರೆ. ಆಡಿದ ಮೂರು ಪಂದ್ಯಗಳಿಂದ ವೈಭವ್ ಗಳಿಸಿದ್ದು ಕೇವಲ 42 ರನ್ ಮಾತ್ರ! (1 ಬೌಂಡರಿ, 5 ಸಿಕ್ಸರ್).
ಆರಂಭದಲ್ಲಿ ವೈಭವ್ಗೆ ತಂಡದಲ್ಲಿ ಸ್ಥಾನ ನೀಡಿ ಎಂದು ಭಾರಿ ಕೂಗು ಎಬ್ಬಿಸಿದ್ದ ಅಭಿಮಾನಿಗಳು, ಈಗ “ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಈ ಹುಡುಗ ಇನ್ನೂ ರೆಡಿಯಾಗಿಲ್ಲ, ಇಷ್ಟು ಬೇಗ ಚಾನ್ಸ್ ಕೊಟ್ಟಿದ್ದೇ ತಪ್ಪು” ಎಂದು ಮ್ಯಾನೇಜ್ಮೆಂಟ್ ವಿರುದ್ಧ ತಿರುಗಿಬಿದ್ದಿದ್ದಾರೆ.
“ಅಶ್ವಿನ್ ಅನಾಲಿಸಿಸ್ ಯಾವತ್ತೂ ತಪ್ಪು ಆಗಲ್ಲ!” – ಫ್ಯಾನ್ಸ್ ಯೂ-ಟರ್ನ್
ವೈಭವ್ ಸೂರ್ಯವಂಶಿಗೆ ಟೀಂ ಇಂಡಿಯಾದಲ್ಲಿ ಅವಕಾಶ ನೀಡಬೇಕೆಂಬ ಚರ್ಚೆಗಳು ಆರಂಭವಾದಾಗ ಹಿರಿಯ ಆಫ್ ಸ್ಪಿನ್ನರ್ ಆರ್. ಅಶ್ವಿನ್ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದರು.
“ವೈಭವ್ ಸೂರ್ಯವಂಶಿಗೆ ಈಗಲೇ ಪ್ಲೇಯಿಂಗ್ 11 ನಲ್ಲಿ ಅವಕಾಶ ನೀಡುವ ಅಗತ್ಯವಿಲ್ಲ. ಅವರಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡು, ಹಿರಿಯ ಆಟಗಾರರಿಂದ ಕಲಿಯಲು ಸಾಕಷ್ಟು ಸಮಯಾವಕಾಶವಿದೆ. ಈಗಿನ ಪರಿಸ್ಥಿತಿಯಲ್ಲಿ ವಿಶ್ವಕಪ್ ಗೆದ್ದ ಆಟಗಾರರನ್ನು ಬೆಂಬಲಿಸುವುದು ಮುಖ್ಯ” ಎಂದು ಅಶ್ವಿನ್ ಹೇಳಿದ್ದರು.
ಅಂದು ಅಶ್ವಿನ್ ಹೇಳಿಕೆಗೆ ಮುಗಿಬಿದ್ದಿದ್ದ ಫ್ಯಾನ್ಸ್, ಇಂದು ವೈಭವ್ ವೈಫಲ್ಯದ ಬಳಿಕ “ಆರ್. ಅಶ್ವಿನ್ ಕ್ರಿಕೆಟಿಂಗ್ ಬುದ್ಧಿಮತ್ತೆ ಮತ್ತು ಅನಾಲಿಸಿಸ್ ಯಾವತ್ತೂ ತಪ್ಪು ಸಾಧ್ಯವಿಲ್ಲ” ಎಂದು ಒಪ್ಪಿಕೊಳ್ಳುತ್ತಿದ್ದಾರೆ.
ಬಿಸಿಸಿಐ ಸೆಲೆಕ್ಷನ್ ಕಮಿಟಿ ವಿರುದ್ಧವೂ ಆಕ್ರೋಶ
ಕೇವಲ ಸೋಶಿಯಲ್ ಮೀಡಿಯಾ ಟ್ರೆಂಡ್ ಮತ್ತು ಅಭಿಮಾನಿಗಳ ಒತ್ತಡವನ್ನು ನೋಡಿಕೊಂಡು ಬಿಸಿಸಿಐ ಹಾಗೂ ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಪ್ಲೇಯಿಂಗ್ 11 ಆಯ್ಕೆ ಮಾಡುತ್ತಿದೆ ಎಂದು ಫ್ಯಾನ್ಸ್ ಆರೋಪಿಸುತ್ತಿದ್ದಾರೆ. ಇಂತಹ ತರಾತುರಿಯ ನಿರ್ಧಾರಗಳೇ ತಂಡದ ಸತತ ಸರಣಿ ಸೋಲಿಗೆ ಪ್ರಮುಖ ಕಾರಣ ಎಂಬ ಟೀಕೆಗಳು ಕೇಳಿಬರುತ್ತಿವೆ.
ಇಂದಾದರೂ ಗೆಲ್ಲುತ್ತಾ ಭಾರತ?
5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. ಆದರೆ ಆ ಬಳಿಕ ಸತತ 3 ಪಂದ್ಯಗಳನ್ನು ಸೋಲುವ ಮೂಲಕ ಭಾರತ ಈಗಾಗಲೇ ಸರಣಿ ಕೈಚೆಲ್ಲಿದೆ. ಇಂದು ಸರಣಿಯ ಕೊನೆಯ ಪಂದ್ಯ ನಡೆಯಲಿದ್ದು, ಕನಿಷ್ಠ ಸಮಾಧಾನಕರ ಜಯವನ್ನಾದರೂ ಟೀಂ ಇಂಡಿಯಾ ದಾಖಲಿಸುತ್ತಾ ಅಥವಾ ಕ್ಲೀನ್ಸ್ವೀಪ್ ಮುಖಭಂಗ ಅನುಭವಿಸುತ್ತಾ ಎಂಬುದನ್ನು ಕಾದುನೋಡಬೇಕಿದೆ. ತವರಿನ ಪ್ರದರ್ಶನ ನೋಡಿದರೆ ಇಂದಿನ ಪಂದ್ಯದಲ್ಲೂ ಭಾರತ ಗೆಲ್ಲುವುದು ಅನುಮಾನ ಎಂದೇ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
