ಮಂಗಳೂರಿನ ನ್ಯಾಯಾಲಯಕ್ಕೂ ತಟ್ಟಿದ ಜೈಲು ಜಾಮರ್​ ಎಫೆಕ್ಟ್​ : ನೆಟ್ವರ್ಕ್​ ಸಿಗದೇ ಹೈಕೋರ್ಟ್ ಮೆಟ್ಟಿಲೇರಿದ ವಕೀಲರು

Jail Jammer Effect : ಮಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನಟೋರಿಯಸ್​ ರೌಡಿಗಳು, ಉಗ್ರಗಾಮಿಗಳು ಖುಲ್ಲಂಖುಲ್ಲಾ ಮೊಬೈಲ್​ ಬಳಕೆ ಮಾಡುತ್ತಿದ್ದ ವಿಡಿಯೋ ವೈರಲ್​ ಆಗಿತ್ತು. ಆದರೆ ಮಂಗಳೂರಿನ ಕಾರಾಗೃಹದ ಕತೆ ಬೇರೆಯೇ ಆಗಿದೆ.

ಇಲ್ಲಿ ಜೈಲಿನ ಹೊರಗೆ ಓಡಾಡುವವರೂ ಮೊಬೈಲ್​ ಫೋನ್​ ಬಳಕೆ ಮಾಡದಂತಹ ಪರಿಸ್ಥಿತಿ ಉಂಟಾಗಿದ್ದು ಈ ವಿಚಾರ ಇದೀಗ ಹೈಕೋರ್ಟ್ ಮೆಟ್ಟಿಲೇರಿದೆ. ಮಂಗಳೂರಿನ ಕಾರಾಗೃಹದಲ್ಲಿ ಜಾಮರ್​ ಅಳವಡಿಕೆ ಮಾಡಲಾಗಿದೆ.

ಆದರೆ ಈ ಜಾಮರ್​ನಿಂದಾಗಿ ಕಾರಾಗೃಹದ ಸುತ್ತಮುತ್ತದ ಪ್ರದೇಶಗಳಲ್ಲಿಯೂ ನೆಟ್​ವರ್ಕ್ ಸಿಗದೇ ಜನರು ಪರದಾಡುವಂತಾಗಿದೆ. ಈ ಜಾಮರ್​ ನೆಟ್​ವರ್ಕ್​ ಸಮಸ್ಯೆಯ ಬಿಸಿ ಕಾರಾಗೃಹದಿಂದ 300 ಮೀಟರ್​ ದೂರದಲ್ಲೇ ಇರುವ ನ್ಯಾಯಾಲಯಕ್ಕೂ ತಟ್ಟಿದ್ದು ವಕೀಲರಿಗೆ ತಮ್ಮ ಕಾರ್ಯನಿರ್ವಹಿಸಲು ಕಷ್ಟವಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಹೀಗಾಗಿ ಮಂಗಳೂರು ಕಾರಾಗೃಹದಲ್ಲಿ ಅಳವಡಿಸಲಾಗಿರುವ ಜಾಮರ್​ನಿಂದ ಸ್ಥಳೀಯರಿಗೆ ತೊಂದರೆಯಾಗದಂತೆ ಸರ್ಕಾರ ನೋಡಿಕೊಳ್ಳಲೇಬೇಕು ಎಂದು ವಕೀಲರು ಗಡುವು ನೀಡಿದ್ದಾರೆ. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆಯ ಎಚ್ಚರಿಕೆಯನ್ನೂ ಮಂಗಳೂರು ವಕೀಲರ ಸಂಘ ಸರ್ಕಾರಕ್ಕೆ ರವಾನೆ ಮಾಡಿದೆ.

ಇದನ್ನೂ ಓದಿ: ಬಾಬಾರಾಮ್ ದೇವ್ ಹೈಕೋರ್ಟ್ ಛೀಮಾರಿ, ಚವನ್ ಪ್ರಾಶ್ ಉತ್ಪನ್ನ ಜಾಹೀರಾತಿಗೆ ಬ್ರೇಕ್

ಕಾರಾಗೃಹದ ಒಳಗೆ ಮೊಬೈಲ್​ ಬಳಕೆ ಮಾಡಲಾಗುತ್ತಿದೆ. ಆದರೆ ಹೊರಗೆ ನಾವು ನೆಟ್​ವರ್ಕ್ ಸಮಸ್ಯೆ ಎದುರಿಸಬೇಕಾಗಿ ಬಂದಿದೆ. ಕೋರ್ಟ್​ನಲ್ಲಿ ಮೊಬೈಲ್​ ಫೋನ್​ ಮೂಲಕ ಕಕ್ಷಿದಾರರ ಜೊತೆ ಮಾತನಾಡಲೂ ಸಾಧ್ಯವಾಗುತ್ತಿಲ್ಲ.

ಇದರಿಂದ ನಮ್ಮ ಕಾರ್ಯವೈಖರಿಗೆ ಬಹಳ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಹೈಕೋರ್ಟ್​ಗೆ ಮಂಗಳೂರು ವಕೀಲರು ಅರ್ಜಿ ಸಲ್ಲಿಕೆ ಮಾಡಿದ್ದಾರೆ . ಈ ಅರ್ಜಿಯನ್ನು ಪರಿಗಣಿಸಿರುವ ಹೈಕೋರ್ಟ್ ನ್ಯಾಯಪೀಠ ಜೈಲಿನಲ್ಲಿ ಅಳವಡಿಸಲಾಗಿರುವ ಜಾಮರ್​ನ ವರದಿ ಕೇಳಿದೆ.

ಜೈಲಿನ ಜಾಮರ್ (Jail Jammer Effect) ವಿರುದ್ಧ ವಕೀಲರ ಸಂಘ ಗಂಭೀರ ಹೋರಾಟಕ್ಕೆ ಮುಂದಾಗಿದ್ದು ಈ ಪ್ರಕರಣ ಯಾವ ಸ್ವರೂಪ ಪಡೆದುಕೊಳ್ಳುತ್ತೆ ಎಂಬುದನ್ನು ಕಾದು ನೋಡಬೇಕಿದೆ.

Exit mobile version