ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಮತ್ತು ಗ್ಲೋಬಲ್ ಡೈರೆಕ್ಟರ್ ಎಸ್.ಎಸ್. ರಾಜಮೌಳಿ ಜೋಡಿಯ ಬಹುನಿರೀಕ್ಷಿತ ಸಿನಿಮಾವಾಗಿರುವ 'ವಾರಣಾಸಿ' ಚಿತ್ರದ ಬಗ್ಗೆ ಹೊಸದೊಂದು ಬಿಗ್ ಅಪ್‌ಡೇಟ್ ಹೊರಬಿದ್ದಿದೆ. ಸಿನಿಮಾದ ಅಧಿಕೃತ ಬಿಡುಗಡೆಗೆ ಇನ್ನು ಸರಿಯಾಗಿ 200 ದಿನಗಳು ಬಾಕಿ ಇರುವಂತೆ, ನಾಯಕ ನಟ ಮಹೇಶ್ ಬಾಬು ತಮ್ಮ ಭಾಗದ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿಕೊಟ್ಟಿದ್ದಾರೆ.
ಮಹೇಶ್ ಬಾಬು ವೃತ್ತಿಜೀವನದಲ್ಲೇ ಅತ್ಯಂತ ಹೆಚ್ಚು ಸಮಯ ತೆಗೆದುಕೊಂಡ ಪ್ರಮುಖ ಚಿತ್ರಗಳಲ್ಲಿ 'ವಾರಣಾಸಿ' ಕೂಡ ಒಂದಾಗಿದೆ. 2025ರಲ್ಲಿ ಆರಂಭವಾದ ಈ ಸುದೀರ್ಘ ಪಯಣ ಈಗ ಅಂತಿಮ ಹಂತದತ್ತ ಸಾಗುತ್ತಿದೆ. ಸ್ಟಾರ್ ನಟನ ಶೂಟಿಂಗ್ ಮುಗಿದ ಬೆನ್ನಲ್ಲೇ, ಚಿತ್ರತಂಡವು ಉಳಿದಿರುವ ಸಣ್ಣಪುಟ್ಟ ದೃಶ್ಯಗಳು ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಏಕಕಾಲದಲ್ಲಿ ನಡೆಸುತ್ತಿದೆ.
ರಾಜಮೌಳಿ ಎಂದಿನಂತೆ ತಮ್ಮ ಸಿನಿಮಾಗಳಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಅತ್ಯಂತ ಅದ್ದೂರಿಯಾಗಿ ಈ ಗ್ಲೋಬಲ್ ಅಡ್ವೆಂಚರ್ ಸಿನಿಾವನ್ನು ರೂಪಿಸುತ್ತಿದ್ದಾರೆ. ಈಗಾಗಲೇ ಪ್ರಕಟವಾಗಿರುವಂತೆ, ಸಿನಿಮಾವು 2027ರ ಏಪ್ರಿಲ್ 7ರಂದು ಜಾಗತಿಕವಾಗಿ ಬಿಡುಗಡೆಯಾಗಲಿದೆ. ರಾಜಮೌಳಿ ಸೃಷ್ಟಿಸಿರುವ ಈ ಅದ್ಭುತ ಲೋಕವನ್ನು ದೊಡ್ಡ ಪರದೆಯ ಮೇಲೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.