Kannada News Next

entertainment

ಕಿಂಗ್​ ಖಾನ್ ನಂ.1 : ವಿರಾಟ್​ ಕೊಹ್ಲಿ ಹಿಂದಿಕ್ಕಿದ ಬಾದ್‌ಶಾ, ಶಾರೂಕ್‌ ಖಾನ್‌ ಬ್ರ್ಯಾಂಡ್‌ ಮೌಲ್ಯ 1,691 ಕೋಟಿ

ಶಾರುಖ್ ಖಾನ್ ಅವರ ಒಟ್ಟು ಬ್ರ್ಯಾಂಡ್ ಮೌಲ್ಯವು ಬರೋಬ್ಬರಿ 177.9 ಮಿಲಿಯನ್ ಡಾಲರ್ ಅಂದರೆ ಭಾರತೀಯ ಕರೆನ್ಸಿಯಲ್ಲಿ ಸುಮಾರು 1,691 ಕೋಟಿ ರೂಪಾಯಿ ತಲುಪಿದೆ.

By ರಶ್ಮಿ ಎಸ್. | Rashmi S
Shah Rukh Khan surpasses Virat Kohli top brand value 1691 crore

ಭಾರತದ ಗ್ಲಾಮರ್ ಮತ್ತು ಉದ್ಯಮ ರಂಗದಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿ ಯಾರು ಎಂಬ ರೇಸ್‌ಗೆ ಈಗ ತಾರ್ಕಿಕ ಅಂತ್ಯ ಸಿಕ್ಕಿದೆ. ಸಿನಿಮಾ ಮತ್ತು ಕ್ರಿಕೆಟ್ ಲೋಕದ ದಿಗ್ಗಜರ ನಡುವಿನ ಈ ಬಿರುಸಿನ ಪೈಪೋಟಿಯಲ್ಲಿ ಬಾಲಿವುಡ್‌ನ ಬಾದ್‌ಶಾ ಶಾರುಖ್ ಖಾನ್ ಅವರು ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಹಾಗೂ ನಟ ರಣವೀರ್ ಸಿಂಗ್ ಅವರನ್ನು ಹಿಂದಿಕ್ಕಿದ್ದಾರೆ.

ಪ್ರಖ್ಯಾತ ಹಣಕಾಸು ಸಲಹಾ ಸಂಸ್ಥೆಯಾದ ಕ್ರೋಲ್ ಬಿಡುಗಡೆ ಮಾಡಿರುವ ಇತ್ತೀಚಿನ ವರದಿಯ ಪ್ರಕಾರ, ಶಾರುಖ್ ಖಾನ್ ಅವರು ದೇಶದ ಅತ್ಯಂತ ಮೌಲ್ಯಯುತ ಸೆಲೆಬ್ರಿಟಿಯಾಗಿ ಹೊರಹೊಮ್ಮಿದ್ದಾರೆ. ವರದಿಯ ಅನ್ವಯ, ಜಾಗತಿಕ ಮಟ್ಟದ ಜನಪ್ರಿಯತೆ ಮತ್ತು ಸಾಲುಸಾಲು ದೊಡ್ಡ ಬ್ರ್ಯಾಂಡ್‌ಗಳ ಸಹಯೋಗದ ಬಲದಿಂದ ಶಾರುಖ್ ಖಾನ್ ಅವರ ಒಟ್ಟು ಬ್ರ್ಯಾಂಡ್ ಮೌಲ್ಯವು ಬರೋಬ್ಬರಿ 177.9 ಮಿಲಿಯನ್ ಡಾಲರ್ ಅಂದರೆ ಭಾರತೀಯ ಕರೆನ್ಸಿಯಲ್ಲಿ ಸುಮಾರು 1,691 ಕೋಟಿ ರೂಪಾಯಿ ತಲುಪಿದೆ.

ಕಳೆದ ವರ್ಷ ಮೂರನೇ ಸ್ಥಾನದಲ್ಲಿದ್ದ ಕಿಂಗ್ ಖಾನ್, ಈ ಬಾರಿ ಭರ್ಜರಿ ಜಿಗಿತ ಕಂಡು ಮೊದಲ ಸಿಂಹಾಸನವನ್ನು ಮರುಪಡೆದಿದ್ದಾರೆ. ಇನ್ನು ಎರಡನೇ ಸ್ಥಾನದಲ್ಲಿ ನಟ ರಣವೀರ್ ಸಿಂಗ್ 162.9 ಮಿಲಿಯನ್ ಡಾಲರ್​ನೊಂದಿಗೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.

ಕಳೆದ ಅವಧಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಟೀಮ್ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ ಅವರು ಈ ಬಾರಿ ಮೂರನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಅವರ ಪ್ರಸ್ತುತ ಬ್ರ್ಯಾಂಡ್ ಮೌಲ್ಯವು 158.4 ಮಿಲಿಯನ್ ಡಾಲರ್ ಆಗಿದೆ.

ಈ ಬ್ರ್ಯಾಂಡ್ ವ್ಯಾಲ್ಯೂ ಎಂಬುದು ಕೇವಲ ತಾರೆಯರ ವೈಯಕ್ತಿಕ ಆಸ್ತಿಯನ್ನು ಮಾತ್ರ ಆಧರಿಸಿರುವುದಿಲ್ಲ. ಬದಲಾಗಿ ಅವರು ನಟಿಸುವ ಜಾಹೀರಾತುಗಳು, ಸಾಮಾಜಿಕ ಜಾಲತಾಣಗಳ ಪ್ರಭಾವ ಹಾಗೂ ಉದ್ಯಮ ರಂಗಕ್ಕೆ ಅವರು ತಂದುಕೊಡುವ ಒಟ್ಟಾರೆ ವ್ಯವಹಾರದ ದೈತ್ಯ ಸಾಮರ್ಥ್ಯವನ್ನು ಇದು ಪ್ರತಿನಿಧಿಸುತ್ತದೆ. ಈ ನಿಟ್ಟಿನಲ್ಲಿ ಶಾರುಖ್ ಖಾನ್ ಇಂದಿಗೂ ತಾವೇ ಅಧಿಪತಿ ಎಂಬುದನ್ನು ಸಾಬೀತುಪಡಿಸಿದ್ದಾರೆ.