ನಟ ಯಶ್ ಬಹುನೀರಿಕ್ಷಿತ ಸಿನಿಮಾ ಟಾಕ್ಸಿಕ್ ಯಶಸ್ಸು ಪಡೆಯುವಲ್ಲಿ ಮುಗ್ಗರಿಸಿದೆ. ಬಿಡುಗಡೆಗೂ ಮುನ್ನ ಸೃಷ್ಟಿಯಾಗಿದ್ದ ಭ್ರಮಾಲೋಕ ಸಿನಿಮಾ ಬಿಡುಗಡೆಯ ಬಳಿಕ ಬರಿದಾದ ಭಾವ ಮೂಡಿದೆ. ಹಾಗಿದ್ದರೇ ಯಶ್ ಮುಂದಿನ ದಾರಿ ಏನು ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಅಷ್ಟೇ ಅಲ್ಲ ಯಶ್ ಹಾಲಿವುಡ್ ಆಸೆ ಬಿಟ್ಟು ಸ್ಯಾಂಡಲ್ ವುಡ್ ಗೆ ಮರಳಬೇಕೆಂಬ ಮಾತು ಕೇಳಿ ಬರ್ತಿದೆ.
ಮಂಡ್ಯದ ಕಿರಾತಕನಾಗಿ ಮಿಂಚಿದ್ದ ಯಶ್ ಕೆಜಿಎಫ್ ಬಳಿಕ ಏರಿದ ಎತ್ತರಕ್ಕೆ ಸ್ಯಾಂಡಲ್ ವುಡ್ ಸಂಭ್ರಮಿಸಿತ್ತು. ಕೆಜಿಎಫ್ ಸಿಕ್ವೆನ್ಸ್ ಸಿನಿಮಾ ಕೂಡ ಹಿಟ್ ಆದ ಬಳಿಕ ಜನರು ಯಶ್ ನನ್ನು ಅಕ್ಷರಷಃ ಆರಾಧಿಸ ತೊಡಗಿದ್ದರು. ಕನ್ನಡದ ಸಿನಿಮಾ ಮಂದಿ ಕೂಡ ಯಶ್‌ನ ವಿಷನ್ ಹಾಗೂ ದೈತ್ಯ ಪ್ರತಿಭೆಯ ಕಂಡು ಬೆರಗಾಗಿದ್ದರು.
ಮುಂದೇ ನಡೆದಿದ್ದೆಲ್ಲ ಇತಿಹಾಸ. ಕೆಜಿಎಫ್ -3 ತೆರೆಗೆ ಬರುತ್ತೆ ಅನ್ನೋ ಲೆಕ್ಕಾಚಾರವನ್ನು ಬದಿಗಿಟ್ಟ ಯಶ್ ದೊಡ್ಡ ಸಾಹಸವೊಂದಕ್ಕೆ ಮುನ್ನುಡಿ ಬರೆದಿದ್ದರು. ಅಕ್ಷರಷಃ ನಾಲ್ಕು ವರ್ಷಗಳ ಕಾಲ ತಪಸ್ಸು ಮಾಡಿ ಪ್ಯಾನ್ ಇಂಡಿಯಾ ಸಿನಿಮಾವೊಂದನ್ನು ಕಟ್ಟಿದರು.
ಒಂದೊಂದು ಆಯ್ದು ಪೋಣಿಸಿದಂತಹ ದೃಶ್ಯಗಳು, ಒಬ್ಬರನ್ನೊಬ್ಬರು ಮೀರಿಸುವಂತಹ ಸುಂದರಿಯರು, ಮೈಜುಮ್ಮೆನ್ನಿಸುವ ದೃಶ್ಯಗಳು , ಲೋಕೇಶನ್ , ಹಾಡು ಎಲ್ಲವೂ ಯಶ್‌ನ ಕ್ರಿಯೆಟಿವಿಟಿ ಹಾಗೂ ಸಿನಿಮಾ ಹಸಿವಿಗೆ ಸಾಕ್ಷಿ ಎಂಬಂತೆ ಸಿದ್ಧವಾಗಿತ್ತು.
ನೂರೆಂಟು ಗಾಸಿಪ್, ಸಾವಿರಾರು ಬಿಲ್ಡಪ್ ನಡುವೆ ಜನರು ನಾಲ್ಕು ವರ್ಷದ ತಪಸ್ಸಿನ ಸಿನಿಮಾ ಹೇಗಿರಬಹುದೆಂಬ ಕಲ್ಪನೆಯಲ್ಲೇ ಕಾದಿದ್ದರು.
ಆದರೆ ತುಂಬ ನೀರಿಕ್ಷೆಗಳ ಬಳಿಕ ತೆರೆಗೆ ಬಂದ ಟಾಕ್ಸಿಕ್ ಮೋಡಿ ಮಾಡಲಿಲ್ಲ. ಥಿಯೇಟರ್‌ಗಳು ತುಂಬಲಿಲ್ಲ. ಶತದಿನ, ಹೌಸ್ ಫುಲ್ ಯಾವ ದಾಖಲೆಗಳು ಮುರಿದು ತುಂಡಾಗಲಿಲ್ಲ. ಇದಕ್ಕೆ ಕಾರಣ ಸಿನಿಮಾ ಕ್ವಾಲಿಟಿ,ಕತೆ ಅಥವಾ ಯಶ್ ನಟನೆಯಲ್ಲ. ಬದಲಾಗಿ ಜನರಿಗೆ ಟಾಕ್ಸಿಕ್ ನಂತಹ ಕತೆ, ಚಿತ್ರಕತೆ ಮನಸೆಳೆಯಲಿಲ್ಲ.
ಜನರು ತಮ್ಮ ಟೆನ್ಸನ್ ಮರೆತು ಎಂಜಾಯ್ ಮಾಡಲು ಮೂರು ತಾಸು ಸಿನಿಮಾ ನೋಡುತ್ತಾರೆಯೇ ಹೊರತು ಮತ್ತಷ್ಟು ಒತ್ತಡಕ್ಕೆ ಒಳಗಾಗಲು ಅಲ್ಲ. ಬಹುಶಃ ಮಿತಿಮೀರಿದ ಕ್ರೌರ್ಯ, ಎಲ್ಲವನ್ನೂ ಹಾಲಿವುಡ್ ರೇಂಜ್‌ನಲ್ಲಿ ಕಟ್ಟಿಕೊಡಲು ಹೋದ ಯಶ್ ನ ದಾವಂತ ಕನ್ನಡಿಗರನ್ನು ಥಿಯೇಟರ್‌ನಲ್ಲಿ ಕಟ್ಟಿ ಹಾಕಲು ವಿಫಲವಾಯಿತು.
ಸಿನಿಮಾದಲ್ಲಿ ಏನಿದ್ದರೂ ಒಂದೆಳೆಯ ನೆಟಿವಿಟಿಯನ್ನಾದರೂ ಪ್ರೇಕ್ಷಕ ಬಯಸುತ್ತಾನೆ. ಆದರೆ ಆ ನೆಟಿವಿಟಿಯಿಂದ ದೂರ ನಿಂತ ಯಶ್ ಸಿನಿಮಾ ಕನ್ನಡದಲ್ಲಿ ಮೋಡಿ ಮಾಡಲಿಲ್ಲ. ಕನ್ನಡದಲ್ಲಿ ಮಾತ್ರವಲ್ಲ ಇಂಗ್ಲೀಷನಲ್ಲಿ ಈ ಸಿನಿಮಾದ ಮೊದಲ ದಿನದ ಭಾರತದ ಗಳಿಕೆ ಕೇವಲ 1.40 ಲಕ್ಷ ರೂಪಾಯಿ. ಮಾರಾಟವಾಗಿದ್ದು ಕೇವಲ 450 ಟಿಕೇಟ್‌ಗಳು.
ಯಶ್ ಟಾಕ್ಸಿಕ್ ಬಿಡುಗಡೆಗೂ ಮುನ್ನ ನಿರೀಕ್ಷೆ ಇದ್ದಿದ್ದು 2000 ಕೋಟಿ ಗಳಿಕೆಯದ್ದು. ಆದರೆ ಈಗ 300 ಕೋಟಿ ಗಳಿಸುವುದಕ್ಕೂ ಪರದಾಟ ನಡೆದಿದೆ. ಸಿನಿಮಾ ರಿಲೀಸಗೂ ಮುನ್ನ ಒಟಿಟಿ ರೈಟ್ಸ್ 200 ಕೋಟಿಯ ಡಿಮ್ಯಾಂಡ್ ಪಡೆದಿತ್ತು. ಈಗ 30 ಕೋಟಿಗೆ ಕೇಳೋರಿಲ್ಲದಂತಾಗಿದೆ.
ಯಶ್ ಕತೆ ಏನು?
ಮೈಸೂರಿನ ಹುಡುಗ ಯಶ್ ಸಿನಿಮಾ ರಾಕ್ಷಸನಾಗಿ ಜಾಗತಿಕ ಸಿನಿಮಾ ಮಟ್ಟಕ್ಕೆ ಬೆಳೆದು ನಿಂತಿದ್ದು ಸಾಧನೆ. ಆದರೆ ಯಶ್ ನ ನಾಲ್ಕು ವರ್ಷಗಳ ಶ್ರಮ ನೀರಿಕ್ಷಿತ ಮಟ್ಟಕ್ಕೆ ಪ್ರೇಕ್ಷಕರ ಮನಮುಟ್ಟಿಲ್ಲ. ಹಾಗಿದ್ದರೇ ಯಶ್ ನ ಕತೆ ಏನು?! ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ಆದರೆ ಸಿನಿಪ್ರಿಯರು ಯಶ್ ಈಗಲಾದರೂ ಕೆಜಿಎಫ್ -3 ನತ್ತ ಮನಸ್ಸು ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ನಮ್ಮ ಹುಡುಗ ನಮ್ಮ ನೆಟಿವಿಟಿಗೆ ತಲುಪುವ ಸಿನಿಮಾ ಮಾಡಬೇಕು ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಕಮೆಂಟ್ ಮಾಡ್ತಿದ್ದಾರೆ.
ಕೆಜಿಎಫ್ -2 ದಲ್ಲೇ ಕೆಜಿಎಫ್ ಸಿಕ್ವೆನ್ಸ್ ಮೂರರ ಕತೆಯೂ ಸಿದ್ಧವಾಗಿತ್ತು ಅನ್ನೋ ಮಾತಿದೆ. ಹಾಗಿದ್ದರೇ ಯಶ್ ಮತ್ತೆ ಕೆಜಿಎಫ್ ಕತೆಯ ಮೂಲಕವೇ ತೆರೆಗೆ ಬರಲಿ ಅನ್ನೋದು ರಾಕಿಂಗ್ ಸ್ಟಾರ್ ಅಭಿಮಾನಿಗಳ ಒತ್ತಾಯ. ಆದರೆ ಸಧ್ಯಕ್ಕೆ ಕೆಜಿಎಫ್ ನ ನಿರ್ದೇಶಕ ಪ್ರಶಾಂತ್ ನೀಲ್ ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿದ್ದು ಮತ್ತೆ ಯಶ್ ಜೊತೆ ಕೆಜಿಎಫ್ ಸಿಕ್ವೆನ್ಸ್ 3ಗಾಗಿ ಜೊತೆಯಾಗ್ತಾರಾ ಅನ್ನೋದು ಸಧ್ಯದ ಕುತೂಹಲ.