ದೇಶದ ಜನತೆಗೆ ಕೇಂದ್ರ ಸರ್ಕಾರದಿಂದ ಗುಡ್​ನ್ಯೂಸ್​ : 39 ಪ್ರಮುಖ ಔಷಧಿಗಳ ದರದಲ್ಲಿ ಭಾರೀ ಇಳಿಕೆ

ದೇಶದ ಬಡ ಹಾಗೂ ಮಧ್ಯಮ ವರ್ಗದ ರೋಗಿಗಳ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರವು ಅತ್ಯಂತ ಮಹತ್ವದ ತೀರ್ಮಾನ ಕೈಗೊಂಡಿದ್ದು, ದಿನನಿತ್ಯದ ಚಿಕಿತ್ಸೆಗೆ ಅತ್ಯಗತ್ಯವಾಗಿರುವ ಪ್ರಮುಖ 39 ಔಷಧಿಗಳ ಗರಿಷ್ಠ ಮಾರಾಟ ದರವನ್ನು ಗಣನೀಯವಾಗಿ ಕಡಿತಗೊಳಿಸಿದೆ.

ದೇಶದ ಬಡ ಹಾಗೂ ಮಧ್ಯಮ ವರ್ಗದ ರೋಗಿಗಳ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರವು ಅತ್ಯಂತ ಮಹತ್ವದ ತೀರ್ಮಾನ ಕೈಗೊಂಡಿದ್ದು, ದಿನನಿತ್ಯದ ಚಿಕಿತ್ಸೆಗೆ ಅತ್ಯಗತ್ಯವಾಗಿರುವ ಪ್ರಮುಖ 39 ಔಷಧಿಗಳ ಗರಿಷ್ಠ ಮಾರಾಟ ದರವನ್ನು ಗಣನೀಯವಾಗಿ ಕಡಿತಗೊಳಿಸಿದೆ. ರಾಷ್ಟ್ರೀಯ ಔಷಧ ದರ ನಿಯಂತ್ರಣ ಪ್ರಾಧಿಕಾರವು ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದು, ಮಧುಮೇಹ, ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವ ಲಕ್ಷಾಂತರ ಕುಟುಂಬಗಳಿಗೆ ಮಾಸಿಕ ವೈದ್ಯಕೀಯ ವೆಚ್ಚದ ಹೊರೆ ತಗ್ಗಲಿದೆ.

ಹೊಸ ಆದೇಶದ ಅನ್ವಯ, ಮಧುಮೇಹ ನಿಯಂತ್ರಣಕ್ಕೆ ಬಳಸುವ ಎಂಪಾಗ್ಲಿಫ್ಲೋಜಿನಾ, ಸಿಟಾಗ್ಲಿಪ್ಟಿನ್ ಮತ್ತು ಮೆಟ್ಫಾರ್ಮಿನ್ ಹೈಡ್ರೋಕ್ಲೋರೈಡ್ ಸಂಯೋಜನೆಯ ಮಾತ್ರೆಗಳ ಬೆಲೆಯನ್ನು ಪ್ರತಿ ಮಾತ್ರೆಗೆ 14.88 ರೂಪಾಯಿಯಿಂದ ಗರಿಷ್ಠ 17.17 ರೂಪಾಯಿ ಒಳಗೆ ಮಿತಿಗೊಳಿಸಲಾಗಿದೆ. ಅದೇ ರೀತಿ, ರಕ್ತದೊತ್ತಡ (ಬಿಪಿ) ನಿಯಂತ್ರಿಸುವ ಆಮ್ಲೋಡಿಪೈನ್, ಬಿಸೊಪ್ರೊಲೊಲ್ ಹಾಗೂ ಟೆಲ್ಮಿಸಾರ್ಟನ್ ಮಿಶ್ರಿತ ಮಾತ್ರೆಯ ದರವನ್ನು 14.74 ರೂಪಾಯಿಗೆ ನಿಗದಿಪಡಿಸಲಾಗಿದೆ. ಇನ್ನು ಹೃದಯದ ತೊಂದರೆ ಇರುವವರಿಗೆ ನೀಡಲಾಗುವ ಕ್ಲೋಪಿಡೋಗ್ರೆಲ್, ಆಸ್ಪಿರಿನ್ ಮತ್ತು ಅಟೊರ್ವಸ್ಟಾಟಿನ್ ಒಳಗೊಂಡ ಸಂಯುಕ್ತ ಮಾತ್ರೆಯ ಬೆಲೆಯನ್ನು ಕೇವಲ 6 ರೂಪಾಯಿಗೆ ತಗ್ಗಿಸಲಾಗಿದೆ.

ಇದರ ಜೊತೆಗೆ ಕಣ್ಣಿನ ಸೋಂಕಿನ ಚಿಕಿತ್ಸೆಯ ನೆಪಾಫೆನಾಕ್ ಮತ್ತು ಮೊಕ್ಸಿಫ್ಲೋಕ್ಸಾಸಿನ್ ಐ ಡ್ರಾಪ್ಸ್ ಬೆಲೆಯನ್ನು ಪ್ರತಿ ಮಿಲಿಲೀಟರ್‌ಗೆ 68.64 ರೂಪಾಯಿಗೆ ಹಾಗೂ ಸಾರ್ವಜನಿಕರು ಹೆಚ್ಚಾಗಿ ಬಳಸುವ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ3 ಮಾತ್ರೆಯ ಬೆಲೆಯನ್ನು ಪ್ರತಿ ಮಾತ್ರೆಗೆ ಗರಿಷ್ಠ 8 ರೂಪಾಯಿಗೆ ನಿಯಂತ್ರಣಕ್ಕೆ ತರಲಾಗಿದೆ. ತುರ್ತು ಚಿಕಿತ್ಸೆಯ ಜೀವ ರಕ್ಷಕ ಇಂಜೆಕ್ಷನ್‌ಗಳಾದ ಆಂಟಿ-ರೇಬಿಸ್ ದರವನ್ನು 119.48 ರೂಪಾಯಿಗೆ ಹಾಗೂ ಹೃದಯಾಘಾತದ ವೇಳೆ ರಕ್ತ ಹೆಪ್ಪುಗಟ್ಟದಂತೆ ತಡೆಯುವ ಟೆನೆಕ್ಟೆಪ್ಲೇಸ್ ಇಂಜೆಕ್ಷನ್ ಬೆಲೆಯನ್ನು60,238.27 ರೂಪಾಯಿಗೆ ನಿಗದಿಗೊಳಿಸಲಾಗಿದೆ. ಯಾವುದೇ ಫಾರ್ಮಸಿಗಳು ಈ ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಔಷಧಿಗಳನ್ನು ಮಾರಾಟ ಮಾಡಿದರೆ ಅಗತ್ಯ ವಸ್ತುಗಳ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಪ್ರಾಧಿಕಾರ ಎಚ್ಚರಿಸಿದೆ.

Good news for the nation from the Central Government Massive reduction in the prices of 39 essential medicines

Exit mobile version