ರಾಜ್ಯದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಆಹಾರ ಇಲಾಖೆಯು ಅತ್ಯಂತ ಸಂತಸದ ಸುದ್ದಿಯೊಂದನ್ನು ನೀಡಲು ಮುಂದಾಗಿದೆ. ಬಿಪಿಎಲ್ ಪಡಿತರ ಚೀಟಿಯನ್ನು ಪಡೆಯಲು ಪ್ರಸ್ತುತ ಚಾಲ್ತಿಯಲ್ಲಿರುವ ವಾರ್ಷಿಕ ಆದಾಯದ ಮಿತಿಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲು ಸರ್ಕಾರ ಗಂಭೀರ ಮಟ್ಟದ ಆಡಳಿತಾತ್ಮಕ ಸಿದ್ಧತೆಗಳನ್ನು ಕೈಗೊಂಡಿದೆ. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ.ಹೆಚ್. ಮುನಿಯಪ್ಪ ಅವರು ಈ ಕುರಿತು ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ.
ಪ್ರಸ್ತುತ ನಿಯಮಾವಳಿಗಳ ಪ್ರಕಾರ ಬಿಪಿಎಲ್ ಕಾರ್ಡ್ ಹೊಂದಲು ಕುಟುಂಬದ ವಾರ್ಷಿಕ ಆದಾಯವು ₹1.20 ಲಕ್ಷದ ಒಳಗಿರಬೇಕು. ಆದರೆ ರಾಜ್ಯದ ಆಡಳಿತಾತ್ಮಕ ಸುಧಾರಣೆ ಆಯೋಗವು ನೀಡಿರುವ ಪ್ರಮುಖ ಶಿಫಾರಸನ್ನು ಪುರಸ್ಕರಿಸಲು ಮುಂದಾಗಿರುವ ಸರ್ಕಾರ, ಈ ಮಿತಿಯನ್ನು ನೇರವಾಗಿ ₹3 ಲಕ್ಷ ರೂಪಾಯಿಗಳಿಗೆ ಏರಿಸುವ ಚಿಂತನೆಯಲ್ಲಿದೆ. ಈ ನಿರ್ಧಾರ ಜಾರಿಗೆ ಬಂದರೆ ಲಕ್ಷಾಂತರ ಅರ್ಹ ಕುಟುಂಬಗಳಿಗೆ ಹೊಸದಾಗಿ ಬಿಪಿಎಲ್ ಕಾರ್ಡ್ ಸೌಲಭ್ಯ ದೊರೆಯಲಿದೆ.
ಮತ್ತೊಂದೆಡೆ, ವಿವಿಧ ತಾಂತ್ರಿಕ ಕಾರಣಗಳು ಅಥವಾ ಆದಾಯ ತೆರಿಗೆ ಪಾವತಿಯ ಹಿನ್ನೆಲೆಯಲ್ಲಿ ಈಗಾಗಲೇ ಸ್ಥಗಿತಗೊಂಡಿರುವ ಬಿಪಿಎಲ್ ಕಾರ್ಡ್ಗಳನ್ನು ಸಂಪೂರ್ಣವಾಗಿ ರದ್ದುಗೊಳಿಸದೆ, ಅವುಗಳನ್ನು ಎಪಿಎಲ್ (APL) ಕಾರ್ಡ್ಗಳಾಗಿ ಪರಿವರ್ತಿಸಲು ಇಲಾಖೆ ಕ್ರಮ ಕೈಗೊಂಡಿದೆ. ಇದರೊಂದಿಗೆ ಕುಟುಂಬದ ಮುಖ್ಯಸ್ಥೆಯಾದ ಯಜಮಾನಿ ಮೃತಪಟ್ಟಲ್ಲಿ, ಕೇವಲ ಒಂದು ತಿಂಗಳ ಅವಧಿಯೊಳಗೆ ಅವರ ಮಗಳು ಅಥವಾ ಸೊಸೆಯ ಹೆಸರನ್ನು ಪಡಿತರ ಚೀಟಿಗೆ ಸೇರ್ಪಡೆ ಮಾಡಲು ಹೊಸದಾಗಿ ಸರಳೀಕೃತ ನಿಯಮ ತರಲಾಗಿದೆ. ಈ ಹಿಂದೆ ಈ ಪ್ರಕ್ರಿಯೆ ಮುಗಿಯಲು ಕನಿಷ್ಠ ಮೂರು ತಿಂಗಳು ಬೇಕಾಗುತ್ತಿತ್ತು.
ಗ್ರಾಹಕರ ಹಿತದೃಷ್ಟಿಯಿಂದ ನ್ಯಾಯಬೆಲೆ ಅಂಗಡಿಗಳ ಅವಧಿಯನ್ನೂ ವಿಸ್ತರಿಸಲಾಗಿದ್ದು, ಇನ್ಮುಂದೆ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಅಂಗಡಿಗಳು ತೆರೆದಿರಲಿವೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಸಾರ್ವಜನಿಕರು ನೇರವಾಗಿ ಇಲಾಖೆಯ ಉಚಿತ ಸಹಾಯವಾಣಿ ಸಂಖ್ಯೆ 1967 ಕ್ಕೆ ಕರೆ ಮಾಡಿ ದೂರು ನೀಡಬಹುದು. ಇನ್ನು ಇದರ ಜೊತೆಯಲ್ಲಿ ಮುಂದಿನ ಮೂರು ತಿಂಗಳ ಒಳಗಾಗಿ ರಾಜ್ಯದ ಪಡಿತರದಾರರಿಗೆ ಇಂದಿರಾ ಕಿಟ್ ಕೂಡ ವಿತರಣೆಯಾಗಲಿದ್ದು, ರಾಜ್ಯದ ಜನತೆಗೆ ಬಂಪರ್ಗಳ ಮೇಲೆ ಬಂಪರ್ ದೊರಕಿದಂತಾಗಿದೆ.
