Synthetic milk : ಹಾಲಲ್ಲ .. ವಿಷ ? ಡಿಟರ್ಜಂಟ್ ಬಳಸಿ 23 ಲಕ್ಷ ಲೀಟರ್​ ನಕಲಿ ಹಾಲು ತಯಾರಿ

ದನಗಳಿಗೆ ಮೇವು ಮಾರಾಟ ಮಾಡುವ ನೆಪದಲ್ಲಿ ಕಿರಾತಕರು ಬಟ್ಟೆ ಒಗೆಯುವ ಡಿಟರ್ಜೆಂಟ್ ಪುಡಿಯನ್ನು ಬಳಸಿ ಬರೋಬ್ಬರಿ 23 ಲಕ್ಷ ಲೀಟರ್‌ಗಿಂತಲೂ ಅಧಿಕ ಕೃತಕ ಹಾಲನ್ನು ತಯಾರಿಸಿ ಮಾರುಕಟ್ಟೆಗೆ ಬಿಟ್ಟಿರುವ ಆಘಾತಕಾರಿ ಸತ್ಯ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

Synthetic milk : ಮುಂಬೈ : ಆಹಾರ ಪದಾರ್ಥಗಳ ಶುದ್ಧತೆಯೇ ಕರಗಿ ಹೋಗುತ್ತಿರುವ ಇಂದಿನ ದಿನಗಳಲ್ಲಿ, ಮಹಾರಾಷ್ಟ್ರದಲ್ಲಿ ಇಡೀ ದೇಶವೇ ಬೆಚ್ಚಿಬೀಳುವಂತಹ ಭೀಕರ ಹಾಲಿನ ಹಗರಣವೊಂದು ಸಾರ್ವಜನಿಕವಾಗಿ ಹೊರಬಂದಿದೆ.

ದನಗಳಿಗೆ ಮೇವು ಮಾರಾಟ ಮಾಡುವ ನೆಪದಲ್ಲಿ ಕಿರಾತಕರು ಬಟ್ಟೆ ಒಗೆಯುವ ಡಿಟರ್ಜೆಂಟ್ ಪುಡಿಯನ್ನು ಬಳಸಿ ಬರೋಬ್ಬರಿ 23 ಲಕ್ಷ ಲೀಟರ್‌ಗಿಂತಲೂ ಅಧಿಕ ಕೃತಕ ಹಾಲನ್ನು ತಯಾರಿಸಿ ಮಾರುಕಟ್ಟೆಗೆ ಬಿಟ್ಟಿರುವ ಆಘಾತಕಾರಿ ಸತ್ಯ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ಧಾರಾಶಿವ ಜಿಲ್ಲೆಯ ಭೂಮ್ ತಾಲೂಕಿನಲ್ಲಿ ಈ ಕರಾಳ ದಂಧೆ ಸದ್ದಿಲ್ಲದೆ ನಡೆಯುತ್ತಿತ್ತು.

ಪೊಲೀಸ್ ಅಧಿಕಾರಿಗಳ ಪ್ರಾಥಮಿಕ ಮಾಹಿತಿಯ ಪ್ರಕಾರ, ಆರೋಪಿಗಳು ಕಳೆದ ಆರು ತಿಂಗಳ ಅವಧಿಯಲ್ಲಿ ಸುಮಾರು 2.30 ಲಕ್ಷ ಕೆಜಿಯಷ್ಟು ಅತ್ಯಂತ ಕಳಪೆ ಗುಣಮಟ್ಟದ ಹಾಲಿನ ಪೌಡರ್ ಅನ್ನು ಈ ಅಕ್ರಮಕ್ಕೆ ಬಳಸಿದ್ದಾರೆ.

ಈ ನಕಲಿ ಹಾಲಿಗೆ ನೈಸರ್ಗಿಕ ರೂಪ ನೀಡಲು ಹಾಗೂ ಹಾಲಿನಲ್ಲಿ ದಪ್ಪನೆಯ ಕೊಬ್ಬಿನ ಅಂಶವನ್ನು ಕೃತಕವಾಗಿ ಕಾಯ್ದುಕೊಳ್ಳಲು ಡಿಟರ್ಜೆಂಟ್ ಪುಡಿ, ತಾಳೆ ಎಣ್ಣೆ ಮತ್ತು ಜೀವಕ್ಕೆ ಕುತ್ತು ತರುವ ಕಳಪೆ ರಾಸಾಯನಿಕಗಳನ್ನು ಬಳಸುತ್ತಿದ್ದರು. ಈ ಕೃತಕ ಹಾಲಿನ ಒಟ್ಟು ಮೌಲ್ಯ ಸುಮಾರು 9.22 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ಗ್ರಾಹಕರಿಗೆ ಅನುಮಾನ ಬರದಂತೆ ಮಾಡಲು ದುಷ್ಕರ್ಮಿಗಳು ಪ್ರತಿ 100 ಲೀಟರ್ ಶುದ್ಧ ಹಾಲಿಗೆ 10 ಲೀಟರ್‌ನಷ್ಟು ಕೃತಕ ಹಾಲನ್ನು ಮಿಶ್ರಣ ಮಾಡುತ್ತಿದ್ದರು. ಅಂದರೆ ಶೇಕಡಾ 10 ರಷ್ಟು ಅನುಪಾತದಲ್ಲಿ ಈ ವಿಷವನ್ನು ಬೆರೆಸಲಾಗುತ್ತಿತ್ತು.

ಈ ಲೆಕ್ಕಾಚಾರದ ಆಧಾರದ ಮೇಲೆ, ಭೂಮ್ ಪ್ರದೇಶದ ವಿವಿಧ ಹಾಲು ಸಂಗ್ರಹ ಕೇಂದ್ರಗಳಿಂದ ಇಡೀ ಮಹಾರಾಷ್ಟ್ರದಾದ್ಯಂತ ಈಗಾಗಲೇ ಸುಮಾರು 2.3 ಕೋಟಿ ಲೀಟರ್‌ಗಿಂತಲೂ ಹೆಚ್ಚು ಕಲಬೆರಕೆ ಹಾಲು ಸರಬರಾಜಾಗಿರಬಹುದು ಎಂದು ಅಧಿಕಾರಿಗಳು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಈ ದಂಧೆಯ ಮುಖ್ಯ ಸೂತ್ರಧಾರ ಬಾಳಾಸಾಹೇಬ್ ಗೋಡ್ಗೆ ಎಂಬಾತ ಹಲವು ಡೈರಿ ಘಟಕಗಳಿಗೆ ಈ ರಾಸಾಯನಿಕ ಹಾಲಿನ ಪುಡಿಯನ್ನು ಸರಬರಾಜು ಮಾಡುತ್ತಿದ್ದ ಎನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು 61 ಚೀಲಗಳಷ್ಟು ಕಲಬೆರಕೆ ಹಾಲಿನ ಪೌಡರ್ ಅನ್ನು ವಶಪಡಿಸಿಕೊಂಡಿದ್ದಾರೆ.

ಪ್ರಸ್ತುತ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಆರೋಪಿಗಳ ವಿರುದ್ಧ ಕಠಿಣ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದರೂ, ಕಳೆದ ಎಂಟು ದಿನಗಳಿಂದ ಅವರೆಲ್ಲರೂ ತಲೆಮರೆಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗಾಗಿ ಸದ್ಯ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ.

ಡಿಟರ್ಜೆಂಟ್ ಮತ್ತು ಕೆಮಿಕಲ್ ಮಿಶ್ರಿತ ಹಾಲಿನ ಸೇವನೆಯಿಂದ ಮಾನವನ ದೇಹದ ಮೇಲಾಗುವ ದಾರುಣ ಪರಿಣಾಮಗಳ ಕುರಿತು ವೈದ್ಯಕೀಯ ತಜ್ಞರು ತೀವ್ರ ಆತಂಕ ಹೊರಹಾಕಿದ್ದಾರೆ. ಇಂತಹ ಹಾಲನ್ನು ನಿರಂತರವಾಗಿ ಬಳಸುವುದರಿಂದ ಯಕೃತ್ತು , ಮೂತ್ರಪಿಂಡ ಹಾಗೂ ಜೀರ್ಣಾಂಗ ವ್ಯವಸ್ಥೆಗಳು ಸಂಪೂರ್ಣವಾಗಿ ಹಾನಿಗೊಳಗಾಗುತ್ತವೆ.

ವಿಶೇಷವಾಗಿ ಚಿಕ್ಕ ಮಕ್ಕಳು, ಗರ್ಭಿಣಿಯರು ಹಾಗೂ ವಯೋವೃದ್ಧರ ಜೀವಕ್ಕೆ ಇದು ನೇರವಾದ ಅಪಾಯವನ್ನು ತಂದೊಡ್ಡುತ್ತದೆ ಎಂದು ವೈದ್ಯರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

Maharashtra 23 lakh liters synthetic milk seized latest updates

Exit mobile version