ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ನಡೆದು 4 ವರ್ಷಗಳೇ ಕಳೆದಿವೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಎನ್ಐಎ ಇದೀಗ ಮತ್ತಿಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆಂಧ್ರಪ್ರದೇಶ ಪೊಲೀಸರು ನೀಡಿದ ಮಾಹಿತಿ ಆಧರಿಸಿ ತಮಿಳುನಾಡು ಹಾಗೂ ಕೇರಳದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಕಳೆದ aa4 ವರ್ಷಗಳಿಂದ ತಲೆಮರೆಸಿಕೊಂಡು ತಿರುಗುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ.
ಇನ್ನು ಬಂಧಿತ ಆರೋಪಿಗಳನ್ನು ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಪೊಯ್ಯಗುಡ್ಡೆ ನಿವಾಸಿ ನೌಷಾದ್ (32) ಹಾಗೂ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ನಿವಾಸಿ ಅಬ್ದುಲ್ ನಾಸೀರ್ (41) ಎಂದು ಗುರುತಿಸಲಾಗಿದೆ. ಇವರಿಬ್ಬರು ಪ್ರವೀಣ್ ನೆಟ್ಟಾರು ಹತ್ಯೆಗೈದವರಿಗೆ ಆಶ್ರಯ ನೀಡಿದ ಆರೋಪ ಎದುರಿಸುತ್ತಿದ್ದರು. ಇವರಿಬ್ಬರ ವಿರುದ್ಧ ಈಗಾಗಲೇ ಚಾರ್ಜ್ಶೀಟ್ ಕೂಡ ಸಲ್ಲಿಕೆಯಾಗಿತ್ತು. ಇವರಿಬ್ಬರು ನಿಷೇಧಿತ ಪಿಎಫ್ಐ ಸಂಘಟನೆಯ ಸದಸ್ಯರಾಗಿದ್ದರು ಎನ್ನಲಾಗಿದೆ. ಇವರಿಬ್ಬರ ಪತ್ತೆಗಾಗಿ ಎನ್ಐಎ ಅಧಿಕಾರಿಗಳು ತಲಾ 2 ಲಕ್ಷ ರೂಪಾಯಿಗಳ ಬಹುಮಾನ ಕೂಡ ಘೋಷಣೆ ಮಾಡಿದ್ದರು.
ಇನ್ನು ಬಂಧಿತ ಆರೋಪಿ ಅಬ್ದುಲ್ ನಾಸೀರ್ ಕೇರಳದ ಕೊಚ್ಚಿಯಲ್ಲಿ ತಲೆಮರೆಸಿಕೊಂಡು ಬದುಕುತ್ತಿದ್ದರೆ ಮತ್ತೊಬ್ಬ ಆರೋಪಿ ನೌಷಾದ್ ನಕಲಿ ಗುರುತಿನೊಂದಿಗೆ ಜೀವನ ಸಾಗಿಸುತ್ತಿದ್ದ ಎನ್ನಲಾಗಿದೆ. ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯವು ಇಬ್ಬರ ಪತ್ತೆಗಾಗಿ ಲುಕೌಟ್ ನೋಟಿಸ್ ಜಾರಿ ಮಾಡಿತ್ತು. ಸುಳಿವು ನೀಡಿದವರಿಗೆ 4 ಲಕ್ಷ ರೂಪಾಯಿಗಳ ಬಹುಮಾನ ನೀಡುವುದಾಗಿಯೂ ಘೋಷಿಸಿತ್ತು. ಕಳೆದ 1 ವಾರದಿಂದ ಬೆಳ್ತಂಗಡಿಯಲ್ಲೇ ಬೀಡುಬಿಟ್ಟಿದ್ದ ಎನ್ಐಎ ಅಧಿಕಾರಿಗಳು ನೌಷಾದ್ನ ಸ್ಥಳೀಯ ಸಂಪರ್ಕಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದರು ಎನ್ನಲಾಗಿದೆ. ಖಚಿತ ಮಾಹಿತಿ ಆಧರಿಸಿದ ಪೊಲೀಸರು ಬರೋಬ್ಬರಿ 4 ವರ್ಷಗಳ ಬಳಿಕ ಈ ಪ್ರಕರಣದ ಇನ್ನಿಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಎನ್ಐಎ ಅಧಿಕಾರಿಗಳು ಈವರೆಗೆ 28 ಆರೋಪಿಗಳನ್ನು ಗುರುತು ಮಾಡಿದೆ. ಇದೀಗ ನಾಸೀರ್ ಹಾಗೂ ನೌಷಾದ್ ಬಂಧನದ ಬಳಿಕ ಈವರೆಗಿನ ಬಂಧಿತರ ಸಂಖ್ಯೆ 24ಕ್ಕೆ ಏರಿಕೆ ಕಂಡಿದೆ. ತಲೆಮರೆಸಿಕೊಂಡಿರುವ ಇನ್ನುಳಿದ ಆರೋಪಿಗಳಿಗಾಗಿಯೂ ಶೋಧ ಕಾರ್ಯ ಭರದಿಂದ ಸಾಗಿದೆ. ನಾಸೀರ್ ಹಾಗೂ ನೌಷಾದ್ರನ್ನೂ ಎನ್ಐಎ ತೀವ್ರ ವಿಚಾರಣೆಗೆ ಒಳಪಡಿಸಲಿದ್ದು, ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಮತ್ತಷ್ಟು ಮಾಹಿತಿ ಹೊರ ಬೀಳುವ ಸಾಧ್ಯತೆಯಿದೆ.
Praveen Nettaru murder case Two accused arrested after 4 years
