ಬೆಂಗಳೂರು: ಕ್ಯಾಬ್‌ಗಾಗಿ ಕಾಯುತ್ತಿದ್ದ ಮಹಿಳೆಗೆ ಲೈಂಗಿಕ ಕಿರುಕುಳ; ಆರೋಪಿ ಅರೆಸ್ಟ್!

ರಸ್ತೆ ಬದಿ ಕ್ಯಾಬ್‌ಗಾಗಿ ಕಾಯುತ್ತಿದ್ದ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿ, ಹಣದ ಆಮಿಷವೊಡ್ಡಿ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ರಾಮಮೂರ್ತಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ

ಬೆಂಗಳೂರು: ರಸ್ತೆ ಬದಿ ಕ್ಯಾಬ್‌ಗಾಗಿ ಕಾಯುತ್ತಿದ್ದ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿ, ಹಣದ ಆಮಿಷವೊಡ್ಡಿ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ರಾಮಮೂರ್ತಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ರಾಮಮೂರ್ತಿ ನಗರದ ಎನ್‌ಆರ್‌ಐ ಲೇಔಟ್ ನಿವಾಸಿ ವಿಜಯ ರಾಘವ (42) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಹಣ್ಣಿನ ವ್ಯಾಪಾರಿಯಾಗಿರುವ ಈತ ಕೃತ್ಯ ಎಸಗಿ ಪರಾರಿಯಾಗಿದ್ದನು.

ಭಾನುವಾರ ರಾತ್ರಿ ರಾಮಮೂರ್ತಿ ನಗರದ ಕಲ್ಕೆರೆಯ ಮಂಜುನಾಥ ನಗರದ ಮುಖ್ಯ ರಸ್ತೆಯಲ್ಲಿ ಮಹಿಳೆಯೊಬ್ಬರು ಕ್ಯಾಬ್‌ಗಾಗಿ ಕಾಯುತ್ತ ನಿಂತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಆರೋಪಿ ವಿಜಯ ರಾಘವ, ಮಹಿಳೆ ಬಳಿ ಅಸಭ್ಯವಾಗಿ ಮಾತನಾಡಿ ಲೈಂಗಿಕ ಪ್ರಸ್ತಾಪ ಮಾಡಿದ್ದಾನೆ.

ಘಟನೆಯ ಸಂಪೂರ್ಣ ದೃಶ್ಯವನ್ನು ಎಚ್ಚೆತ್ತ ಸಂತ್ರಸ್ತೆ ಮಹಿಳೆ ತನ್ನ ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿಕೊಂಡಿದ್ದಾರೆ. ಇದನ್ನು ಗಮನಿಸಿದ ಆರೋಪಿ ಕೂಡಲೇ ಬೈಕ್ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ.

ಆರೋಪಿಯ ವಿಕೃತ ವರ್ತನೆಯ ವಿಡಿಯೋವನ್ನು ಸಂತ್ರಸ್ತೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ರಾಮಮೂರ್ತಿ ನಗರ ಠಾಣೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ತನಿಖೆ ನಡೆಸಿ ಕೆಲವೇ ಗಂಟೆಗಳಲ್ಲಿ ಆರೋಪಿ ವಿಜಯ ರಾಘವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Exit mobile version