News Next Kannada

bengaluru

ಮೆಟ್ರೋ ಪ್ರಯಾಣಿಕರಿಗೆ ಗುಡ್​ನ್ಯೂಸ್​ : ಮುಂದಿನ ವರ್ಷವೇ ಬೆಂಗಳೂರು ಏರ್‌ಪೋರ್ಟ್​ವರೆಗೆ BMRCLಸೇವೆ - 45 ನಿಮಿಷ ಪ್ರಯಾಣ

ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬಹುನಿರೀಕ್ಷಿತ ಬ್ಲೂ ಲೈನ್ ಮಾರ್ಗದ ಸಿವಿಲ್ ಕಾಮಗಾರಿಗಳು ಈಗಾಗಲೇ ಶೇಕಡಾ 75 ರಷ್ಟು ಯಶಸ್ವಿಯಾಗಿ ಪೂರ್ಣಗೊಂಡಿವೆ.

By ರಶ್ಮಿ ಎಸ್. | Rashmi S
bengaluru metro airport bmrcl service 45- minute travel next year

ಬೆಂಗಳೂರು : ಸಿಲಿಕಾನ್‌ ಸಿಟಿ ಬೆಂಗಳೂರು ನಗರದ ಟ್ರಾಫಿಕ್ ಸಮಸ್ಯೆಯಿಂದ ಬೇಸತ್ತು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲು ಗಂಟೆಗಟ್ಟಲೆ ಪರದಾಡುತ್ತಿದ್ದ ಪ್ರಯಾಣಿಕರಿಗೆ ನಮ್ಮ ಮೆಟ್ರೋ ಶೀಘ್ರದಲ್ಲೇ ಭರ್ಜರಿ ಸಿಹಿ ಸುದ್ದಿ ನೀಡಲು ಸಜ್ಜಾಗಿದೆ.

ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬಹುನಿರೀಕ್ಷಿತ ಬ್ಲೂ ಲೈನ್ ಮಾರ್ಗದ ಸಿವಿಲ್ ಕಾಮಗಾರಿಗಳು ಈಗಾಗಲೇ ಶೇಕಡಾ 75 ರಷ್ಟು ಯಶಸ್ವಿಯಾಗಿ ಪೂರ್ಣಗೊಂಡಿವೆ. ಸದ್ಯ ಬಾಕಿ ಉಳಿದಿರುವ ಪ್ರಕ್ರಿಯೆಗಳು ನಿಗದಿತ ಸಮಯದೊಳಗೆ ಮುಕ್ತಾಯಗೊಂಡರೆ, ಮುಂದಿನ ವರ್ಷದ ಆರಂಭದಲ್ಲೇ ಈ ಮಾರ್ಗದಲ್ಲಿ ಪ್ರಾಯೋಗಿಕ ರೈಲು ಸಂಚಾರ ಆರಂಭವಾಗುವ ಸಾಧ್ಯತೆಯಿದೆ.

ಈ ಯೋಜನೆ ಸಾಕಾರಗೊಂಡರೆ ಎಂ.ಜಿ. ರಸ್ತೆಯಿಂದ ವಿಮಾನ ನಿಲ್ದಾಣಕ್ಕೆ ಕೇವಲ 45 ನಿಮಿಷಗಳಲ್ಲಿ ಅತ್ಯಂತ ಸುಲಭವಾಗಿ ತಲುಪಬಹುದಾಗಿದೆ. ಯೋಜನೆಯನ್ನು ತಡೆರಹಿತವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮೆಟ್ರೋ ಸಂಸ್ಥೆ ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ ಉನ್ನತ ಅಧಿಕಾರಿಗಳು ಇತ್ತೀಚೆಗೆ ಸುದೀರ್ಘ ಸಭೆ ನಡೆಸಿ ಮಹತ್ವದ ತೀರ್ಮಾನಗಳನ್ನು ಕೈಗೊಂಡಿದ್ದಾರೆ.

ಪ್ರಮುಖವಾಗಿ ವಿಮಾನ ನಿಲ್ದಾಣದ ಆವರಣದ ಒಳಗಡೆ ಕಾರ್ಗೋ ವಿಭಾಗದ ಬಳಿ ಒಂದು ಹಾಗೂ ಎರಡನೇ ಟರ್ಮಿನಲ್ ಬಳಿ ಮತ್ತೊಂದು ಸೇರಿ ಒಟ್ಟು ಎರಡು ಅತ್ಯಾಧುನಿಕ ನಿಲ್ದಾಣಗಳು ತಲೆಎತ್ತಲಿವೆ.

ಈ ನಿಲ್ದಾಣಗಳ ಸಿವಿಲ್ ಕಟ್ಟಡ, ಸಿಸಿಟಿವಿ ಭದ್ರತೆ ಮತ್ತು ಪ್ರಯಾಣಿಕರ ಚೆಕ್-ಇನ್ ವ್ಯವಸ್ಥೆಯ ಸಂಪೂರ್ಣ ಜವಾಬ್ದಾರಿಯನ್ನು ವಿಮಾನ ನಿಲ್ದಾಣ ಪ್ರಾಧಿಕಾರವೇ ವಹಿಸಿಕೊಂಡಿದೆ. ಈ ನಿಲ್ದಾಣಗಳಿಗೆ ಅಗತ್ಯವಿರುವ ರೈಲು ಹಳಿ ಅಳವಡಿಕೆ, ಸಿಗ್ನಲಿಂಗ್ ಮತ್ತು ಸಂವಹನ ತಂತ್ರಜ್ಞಾನದ ಕೆಲಸಗಳನ್ನು ಮಾತ್ರ ನಮ್ಮ ಮೆಟ್ರೋ ನಿರ್ವಹಿಸಲಿದೆ.

ಪ್ರಸ್ತುತ ಸೆಂಟ್ರಲ್ ಸಿಲ್ಕ್ ಬೋರ್ಡ್ ಮತ್ತು ಕೆ.ಆರ್. ಪುರಂ ವಲಯಗಳಲ್ಲಿ ಸಿವಿಲ್ ಕೆಲಸಗಳು ಪೂರ್ಣಗೊಂಡಿದ್ದು, ಹೆಬ್ಬಾಳ ಹಾಗೂ ಯಲಹಂಕ ರೈಲ್ವೆ ಗೇಟ್ ಬಳಿ ಟ್ರಾಫಿಕ್ ದಟ್ಟಣೆಯ ಕಾರಣದಿಂದ ಕಾಮಗಾರಿ ಕೊಂಚ ನಿಧಾನವಾಗಿ ಸಾಗುತ್ತಿದೆ. ಈ ಎಲ್ಲಾ ಅಡೆತಡೆಗಳನ್ನು ನಿವಾರಿಸಿ, ಮುಂದಿನ ಮೂರು ತಿಂಗಳೊಳಗೆ ಬಾಕಿ ಕೆಲಸಗಳನ್ನು ಮುಗಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಗಡುವು ನೀಡಲಾಗಿದೆ.

ಈ ಬ್ಲೂ ಲೈನ್ ಹಾಗೂ ನಾಗವಾರ ಸಂಪರ್ಕದ ಪಿಂಕ್ ಲೈನ್ ಮಾರ್ಗಗಳು ಉದ್ಘಾಟನೆಗೊಂಡರೆ, ಐಟಿ ಉದ್ಯೋಗಿಗಳು ಸೇರಿದಂತೆ ಇಡೀ ಬೆಂಗಳೂರಿನ ಜನತೆಗೆ ನಿರಾಯಾಸ ಏರ್‌ಪೋರ್ಟ್ ಪ್ರಯಾಣ ಸಾಧ್ಯವಾಗಲಿದೆ.