News Next Kannada

bengaluru

ರಾಜಧಾನಿಯಲ್ಲಿ ಹೊಸ ಪಾರ್ಕಿಂಗ್ ನೀತಿ: ರಸ್ತೆ ಬದಿ ಕಾರು ನಿಲ್ಲಿಸಲು ವಾರ್ಷಿಕ ₹25 ಸಾವಿರ ಕಡ್ಡಾಯ!

ಸಿಲಿಕಾನ್ ಸಿಟಿಯಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ಹಾಗೂ ರಸ್ತೆ ಬದಿಯ ಪಾರ್ಕಿಂಗ್ ಗೊಂದಲಗಳಿಗೆ ಶಾಶ್ವತ ಬ್ರೇಕ್ ಹಾಕಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮಹತ್ವದ ಹೆಜ್ಜೆ ಇಟ್ಟಿದೆ.

By Meghana Pranuth | ಮೇಘನಾ ಪ್ರಣೂತ್‌
Parking in bangalore

ಸಿಲಿಕಾನ್ ಸಿಟಿಯಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ಹಾಗೂ ರಸ್ತೆ ಬದಿಯ ಪಾರ್ಕಿಂಗ್ ಗೊಂದಲಗಳಿಗೆ ಶಾಶ್ವತ ಬ್ರೇಕ್ ಹಾಕಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಸಾರ್ವಜನಿಕ ರಸ್ತೆಗಳನ್ನು ತಮ್ಮ ಸ್ವಂತ ಆಸ್ತಿಯಂತೆ ಬಳಸಿಕೊಂಡು ವಾಹನ ನಿಲ್ಲಿಸುವ ಮಾಲೀಕರಿಗೆ ಜಿಬಿಎ ಬಿಸಿ ಮುಟ್ಟಿಸಿದ್ದು, ನೂತನ ಪಾರ್ಕಿಂಗ್ ನೀತಿಯ ಕರಡು ಪ್ರಸ್ತಾವನೆಯನ್ನು ಪ್ರಕಟಿಸಿದೆ. ಇನ್ಮುಂದೆ ನಗರದ ವಸತಿ ಪ್ರದೇಶಗಳ ರಸ್ತೆಗಳಲ್ಲಿ ಉಚಿತವಾಗಿ ಕಾರುಗಳನ್ನು ನಿಲ್ಲಿಸುವಂತಿಲ್ಲ.

ಹೊಸ ನಿಯಮದ ಪ್ರಕಾರ, ಸ್ವಂತ ಕಾಂಪೌಂಡ್ ಒಳಗಡೆ ಜಾಗವಿಲ್ಲದೆ ಮನೆ ಹೊರಗಿನ ರಸ್ತೆಗಳಲ್ಲಿ ವಾಹನ ನಿಲ್ಲಿಸುವ ನಿವಾಸಿಗಳಿಗೆ ವಾರ್ಷಿಕ ಪಾಸ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗುತ್ತಿದೆ. ವಾಹನಗಳ ಗಾತ್ರಕ್ಕೆ ಅನುಗುಣವಾಗಿ ವಾರ್ಷಿಕ ಕನಿಷ್ಠ 15,000 ರೂಪಾಯಿಯಿಂದ ಹಿಡಿದು ಗರಿಷ್ಠ 25,000 ರೂಪಾಯಿವರೆಗೆ ಶುಲ್ಕ ನಿಗದಿಪಡಿಸಲಾಗಿದೆ.

ಇದರಲ್ಲಿ ಸಣ್ಣ ಕಾರುಗಳಿಗೆ ವರ್ಷಕ್ಕೆ 15,000 ರೂ., ಮಧ್ಯಮ ಗಾತ್ರದ ಕಾರುಗಳಿಗೆ 20,000 ರೂ. ಹಾಗೂ SUV ಮಾದರಿಯ ದೊಡ್ಡ ವಾಹನಗಳಿಗೆ 25,000 ರೂ. ಶುಲ್ಕ ವಿಧಿಸಲು ಉದ್ದೇಶಿಸಲಾಗಿದೆ.

ಇದಲ್ಲದೆ ನಗರದ ಒಟ್ಟು ರಸ್ತೆಗಳನ್ನು ಎ, ಬಿ ಮತ್ತು ಸಿ ಎಂದು ಮೂರು ವಲಯಗಳಾಗಿ ವರ್ಗೀಕರಿಸಲಾಗಿದ್ದು, ವಾಣಿಜ್ಯ ಪ್ರದೇಶಗಳಲ್ಲಿ ಗಂಟೆಯ ಆಧಾರದ ಮೇಲೆ ಪ್ರತ್ಯೇಕ ದರ ಇರಲಿದೆ. ಮೆಟ್ರೋ ಹಾಗೂ ಬಸ್ ನಿಲ್ದಾಣಗಳ ಸುತ್ತಮುತ್ತಲಿನ ರಸ್ತೆಗಳು, ಟ್ರಾಫಿಕ್ ಸಿಗ್ನಲ್‌ಗಳ ಸಮೀಪದ ಜಾಗಗಳನ್ನು ಕಟ್ಟುನಿಟ್ಟಿನ ನಿಷೇಧಿತ ವಲಯಗಳೆಂದು ಘೋಷಿಸಲಾಗಿದೆ.

ಮತ್ತೊಂದೆಡೆ, ನಗರದಲ್ಲಿ ಪಾರ್ಕಿಂಗ್ ಸಮಸ್ಯೆ ನೀಗಿಸಲು ತಮ್ಮ ಖಾಲಿ ನಿವೇಶನಗಳನ್ನು ಸಾರ್ವಜನಿಕ ನಿಲ್ದಾಣಗಳಾಗಿ ಪರಿವರ್ತಿಸುವ ಮಾಲೀಕರಿಗೆ ಆಸ್ತಿ ತೆರಿಗೆಯಲ್ಲಿ ವಿಶೇಷ ವಿನಾಯಿತಿ ನೀಡುವ ಉತ್ತಮ ಪ್ರಸ್ತಾವನೆಯನ್ನೂ ತರಲಾಗಿದೆ.

ಸಾರ್ವಜನಿಕರು ಈ ಕರಡು ನೀತಿಯನ್ನು ಕೂಲಂಕಷವಾಗಿ ಪರಿಶೀಲಿಸಿ, ತಮ್ಮ ಸಲಹೆಗಳು ಅಥವಾ ಆಕ್ಷೇಪಣೆಗಳನ್ನು ಸಲ್ಲಿಸಲು ಜಿಬಿಎ ಒಂದು ತಿಂಗಳ ಕಾಲಾವಕಾಶ ನೀಡಿದೆ. ಈ ಕರಡು ಅಂತಿಮವಾಗಿ ಜಾರಿಗೆ ಬಂದರೆ ಬೆಂಗಳೂರಿನ ವಾಹನ ಸವಾರರ ಜೇಬಿಗೆ ದೊಡ್ಡ ಮಟ್ಟದ ಕತ್ತರಿ ಬೀಳುವುದು ಖಚಿತ.