ಸಾಲಿಗ್ರಾಮ: ರೋಟರಿ ಕ್ಲಬ್ ಕೋಟ ಬ್ರಿಗೇಡ್ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಾಲಿಗ್ರಾಮದ ಹೊಸಬದುಕು ಆಶ್ರಮದಲ್ಲಿ ಆಶ್ರಮವಾಸಿಗಳೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕೋಟ ಬ್ರಿಗೇಡ್ ಅಧ್ಯಕ್ಷರಾದ ಪ್ರಕಾಶ್ ಪೂಜಾರಿ ಬನ್ನಾಡಿ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸುವ ಹಾಗೂ ದೇಶದ ಏಕತೆ, ಸಹಬಾಳ್ವೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಮತ್ತಷ್ಟು ಬಲಪಡಿಸುವ ದಿನವಾಗಿದೆ. ಸಮಾಜದ ವಿವಿಧ ವರ್ಗಗಳೊಂದಿಗೆ ಹಬ್ಬ-ಹರಿದಿನಗಳನ್ನು ಆಚರಿಸುವ ಮೂಲಕ ಸಂತಸ ಹಂಚಿಕೊಳ್ಳುವುದು ರೋಟರಿಯ ಸಾಮಾಜಿಕ ಸೇವಾ ಚಟುವಟಿಕೆಗಳ ಪ್ರಮುಖ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ವೃದ್ಧಾಶ್ರಮದ ನಿವಾಸಿಗಳೊಂದಿಗೆ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.
ವಲಯ 2ರ ಮಾಜಿ ಸಹಾಯಕ ಗವರ್ನರ್ ಚಂದ್ರಶೇಖರ್ ಮೆಂಡನ್ ಅವರು ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆ ಕೇವಲ ಧ್ವಜಾರೋಹಣಕ್ಕೆ ಸೀಮಿತವಾಗದೆ, ಸಮಾಜದ ಹಿರಿಯರನ್ನು ಗೌರವಿಸುವ ಮತ್ತು ಅವರೊಂದಿಗೆ ಸಂತೋಷ ಹಂಚಿಕೊಳ್ಳುವ ಸಂದರ್ಭವಾಗಬೇಕು. ಹೊಸಬದುಕು ಆಶ್ರಮದಂತಹ ಸಂಸ್ಥೆಗಳು ಹಿರಿಯರಿಗೆ ಆಶ್ರಯ, ಆತ್ಮೀಯತೆ ಹಾಗೂ ಬದುಕಿನಲ್ಲಿ ಭರವಸೆ ನೀಡುತ್ತಿರುವುದು ಶ್ಲಾಘನೀಯ. ಇಂತಹ ಸಂಸ್ಥೆಗಳೊಂದಿಗೆ ರೋಟರಿ ಕ್ಲಬ್ ಕೋಟ ಬ್ರಿಗೇಡ್ ನಿರಂತರವಾಗಿ ಕೈಜೋಡಿಸುವ ಮೂಲಕ ಸಮಾಜಮುಖಿ ಕಾರ್ಯಗಳನ್ನು ಮುಂದುವರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಶ್ರಮವಾಸಿಗಳಿಗೆ ರೋಟರಿ ಕ್ಲಬ್ ಕೋಟ ಬ್ರಿಗೇಡ್ ವತಿಯಿಂದ ಬೆಳಗ್ಗಿನ ಉಪಹಾರದ ವ್ಯವಸ್ಥೆಯನ್ನು ಮಾಡಲಾಯಿತು.
ಕಾರ್ಯಕ್ರಮದಲ್ಲಿ ವಲಯ ಸೇನಾನಿ ದಯಾನಂದ ಆಚಾರ್ಯ, ರೋಟರಿ ಕ್ಲಬ್ ಕೋಟ ಬ್ರಿಗೇಡ್ ಕಾರ್ಯದರ್ಶಿ ಶಿವರಾಜ್, ಹೊಸಬದುಕು ಆಶ್ರಮದ ಪ್ರವರ್ತಕ ವಿನಯಚಂದ್ರ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಮಾಜಿ ಸದಸ್ಯರಾದ ಕರುಣಾಕರ್, ರೋಟರಿ ಕ್ಲಬ್ ಕೋಟ ಬ್ರಿಗೇಡ್ ಸದಸ್ಯರಾದ ಡಾ. ಗಣೇಶ್, ಉದಯ್ ಹೆಗ್ಡೆ ಶಾನಾಡಿ, ಸುರೇಶ್ ಆಚಾರ್ಯ, ವಿಷ್ಣುಮೂರ್ತಿ ಉರಾಳ, ಪ್ರಕಾಶ್ ಹಂದಟ್ಟು, ಭಾಸ್ಕರ್ ಪೂಜಾರಿ, ರವಿನಾಥ್ ಪೂಜಾರಿ, ಅರುಣ್ BKS, ಪ್ರಥ್ವಿನ್ ಸಿ. ಮೆಂಡನ್, ರಾಜು ಪಾರಂಪಳ್ಳಿ, ಮಿತಿಲೇಶ್ ಆಚಾರ್ಯ ಹಾಗೂ ಆ್ಯನ್ಸ್ ಕ್ಲಬ್ ಕಾರ್ಯದರ್ಶಿ ಪ್ರಮೀಳಾ ಶಿವರಾಜ್, ಆ್ಯನ್ಸ್ ಕ್ಲಬ್ ಸದಸ್ಯರಾದ ಶಶಿಕಲಾ ಗಣೇಶ್, ಶಾರದಾ ಸತೀಶ್ ಪೂಜಾರಿ, ಆಶಾ ಭಾಸ್ಕರ್ ಸೇರಿದಂತೆ ಗಗನ್, ಹಾಗೂ ಆಶ್ರಮದ ಸದಸ್ಯರು ಉಪಸ್ಥಿತರಿದ್ದರು.
ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಶ್ರಮವಾಸಿಗಳೊಂದಿಗೆ ಆತ್ಮೀಯವಾಗಿ ಸಮಯ ಕಳೆಯುವ ಮೂಲಕ ರೋಟರಿ ಕ್ಲಬ್ ಕೋಟ ಬ್ರಿಗೇಡ್ ಸದಸ್ಯರು ರಾಷ್ಟ್ರೀಯ ಹಬ್ಬವನ್ನು ಸಾಮಾಜಿಕ ಕಾಳಜಿಯೊಂದಿಗೆ ಆಚರಿಸಿದರು.