Kannada News Next

india

ಗ್ರಾಮೀಣ ಭಾಗದ ಎಲ್‌ಪಿಜಿ ಗ್ರಾಹಕರಿಗೆ ಕೇಂದ್ರದಿಂದ ಬಿಗ್ ರಿಲೀಫ್ : ಸಿಲಿಂಡರ್ ಬುಕಿಂಗ್ ನಿಯಮ ಸಡಿಲಿಕೆ

ದೇಶದ ಗ್ರಾಮೀಣ ಭಾಗದ ಗೃಹಬಳಕೆಯ ಎಲ್‌ಪಿಜಿ ಗ್ಯಾಸ್ ಗ್ರಾಹಕರಿಗೆ ಕೇಂದ್ರ ಸರ್ಕಾರವು ಭರ್ಜರಿ ಕೊಡುಗೆಯೊಂದನ್ನು ನೀಡಿದೆ.

By ರಶ್ಮಿ ಎಸ್. | Rashmi S
central-govt-eases-lpg-cylinder-booking-rules-rural-consumers

ದೇಶದ ಗ್ರಾಮೀಣ ಭಾಗದ ಗೃಹಬಳಕೆಯ ಎಲ್‌ಪಿಜಿ ಗ್ಯಾಸ್ ಗ್ರಾಹಕರಿಗೆ ಕೇಂದ್ರ ಸರ್ಕಾರವು ಭರ್ಜರಿ ಕೊಡುಗೆಯೊಂದನ್ನು ನೀಡಿದೆ. ಇಷ್ಟು ದಿನ ಹಳ್ಳಿಗಳಲ್ಲಿ ಹೊಸ ಸಿಲಿಂಡರ್ ಬುಕ್ ಮಾಡಲು ಇದ್ದ ಕಠಿಣ ನಿಯಮವನ್ನು ಸಡಿಲಗೊಳಿಸಿರುವ ಸರ್ಕಾರ, ರೀಫಿಲ್ಲಿಂಗ್ ಬುಕಿಂಗ್‌ನ ಕಡ್ಡಾಯ ಕಾಯುವ ಅವಧಿಯನ್ನು ಕಡಿತಗೊಳಿಸಿ ಮಹತ್ವದ ಆದೇಶ ಹೊರಡಿಸಿದೆ.

ಇಲ್ಲಿಯವರೆಗೆ ಗ್ರಾಮೀಣ ಭಾಗದ ಗ್ರಾಹಕರು ಒಂದು ಸಿಲಿಂಡರ್ ಪಡೆದ ನಂತರ ಮತ್ತೊಂದು ಸಿಲಿಂಡರ್ ಬುಕ್ ಮಾಡಲು ಬರೋಬ್ಬರಿ 45 ದಿನಗಳ ಕಾಲ ಕಾಯಬೇಕಾದ ಅನಿವಾರ್ಯತೆ ಇತ್ತು. ಆದರೆ ಈಗಿನ ಹೊಸ ಆದೇಶದ ಪ್ರಕಾರ ಈ ಕಾಯುವ ಅವಧಿಯನ್ನು 25 ದಿನಗಳಿಗೆ ಸೀಮಿತಗೊಳಿಸಲಾಗಿದೆ. ಇದರೊಂದಿಗೆ ಇನ್ಮುಂದೆ ನಗರ ಹಾಗೂ ಗ್ರಾಮೀಣ ಪ್ರದೇಶಗಳೆರಡರಲ್ಲೂ ಒಂದೇ ಮಾದರಿಯ ನಿಯಮ ಜಾರಿಗೆ ಬಂದಂತಾಗಿದ್ದು, ಗ್ರಾಹಕರು ಪ್ರತಿ 25 ದಿನಗಳ ಅಂತರದಲ್ಲಿ ಹೊಸ ಸಿಲಿಂಡರ್ ಅನ್ನು ಸುಲಭವಾಗಿ ಕಾಯ್ದಿರಿಸಬಹುದಾಗಿದೆ.

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಹಾಯಕ ಸಚಿವ ಸುರೇಶ್ ಗೋಪಿ ಅವರ ಪ್ರಕಾರ, ಈ ಹಿಂದೆ ಮಧ್ಯಪ್ರಾಚ್ಯದಲ್ಲಿ ತಲೆದೋರಿದ್ದ ಜಾಗತಿಕ ಬಿಕ್ಕಟ್ಟಿನಿಂದಾಗಿ ಭಾರತಕ್ಕೆ ಎಲ್‌ಪಿಜಿ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿತ್ತು. ಅನಿಲದ ಕೊರತೆಯನ್ನು ನೀಗಿಸಲು ಮತ್ತು ದುರುಪಯೋಗ ತಡೆಯಲು ನಗರ ಹಾಗೂ ಹಳ್ಳಿಗಳಿಗೆ ಪ್ರತ್ಯೇಕ ದಿನಗಳ ನಿರ್ಬಂಧ ವಿಧಿಸಲಾಗಿತ್ತು. ಆದರೆ ಸದ್ಯ ದೇಶದಲ್ಲಿ ಎಲ್‌ಪಿಜಿ ಪೂರೈಕೆ ಪರಿಸ್ಥಿತಿ ಸಂಪೂರ್ಣವಾಗಿ ಸುಧಾರಿಸಿದ್ದು, ದಾಸ್ತಾನು ಸುಸ್ಥಿತಿಗೆ ಮರಳಿರುವುದರಿಂದ ಈ ಹಳೆಯ ಕಠಿಣ ನಿಯಮವನ್ನು ಕೇಂದ್ರ ಸರ್ಕಾರ ಕೈಬಿಟ್ಟಿದೆ.

ಈ ಹೊಸ ನಿಯಮವನ್ನು ತಕ್ಷಣದಿಂದಲೇ ಜಾರಿಗೆ ತರುವಂತೆ ದೇಶದ ಎಲ್ಲಾ ತೈಲ ಮಾರಾಟ ಕಂಪನಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸರ್ಕಾರದ ಈ ಜನಸ್ನೇಹಿ ನಿರ್ಧಾರದಿಂದಾಗಿ ವಿಶೇಷವಾಗಿ ಹಳ್ಳಿಗಳಲ್ಲಿ ವಾಸಿಸುವ ಮತ್ತು ದೊಡ್ಡ ಕುಟುಂಬ ಹೊಂದಿರುವ ಕೋಟ್ಯಂತರ ಗೃಹಿಣಿಯರಿಗೆ ಹಬ್ಬಗಳ ಹೊತ್ತಲ್ಲೇ ಗ್ಯಾಸ್ ಖಾಲಿಯಾಗುವ ಆತಂಕ ದೂರಾಗಿದ್ದು, ಭಾರಿ ನೆಮ್ಮದಿ ತಂದಿದೆ.