Kannada News Next

india

ಅಮ್ಮನ ಪಾದ ಮುಟ್ಟಿ ಕ್ಷಮೆ ಕೇಳಿ : ಆಸ್ತಿಗೆ ಕಣ್ಣು ಹಾಕಿದ ಮಗನಿಗೆ ಸುಪ್ರೀಂಕೋರ್ಟ್ ಛೀಮಾರಿ

ದೆಹಲಿಯ ವೃದ್ಧ ದಂಪತಿಗಳು ತಮ್ಮ ಸ್ವಂತ ಆಸ್ತಿಯ ಮೊದಲ ಮಹಡಿಯಲ್ಲಿ ಮಗ ಹಾಗೂ ಸೊಸೆಗೆ ಯಾವುದೇ ಬಾಡಿಗೆ ಇಲ್ಲದೆ ವಾಸಿಸಲು ಪ್ರೀತಿಯಿಂದ ಅವಕಾಶ ನೀಡಿದ್ದರು.

By ರಶ್ಮಿ ಎಸ್. | Rashmi S
supreme court scold son for property greed asks to apologize to mother

ಹೆತ್ತ ತಾಯಿಯ ಮಹತ್ವ ಮತ್ತು ಸ್ಥಾನವನ್ನು ಸಾರುವ ಅತ್ಯಂತ ಭಾವನಾತ್ಮಕ ಹಾಗೂ ಚಾರಿತ್ರಿಕ ತೀರ್ಪೊಂದನ್ನು ದೇಶದ ಸರ್ವೋಚ್ಚ ನ್ಯಾಯಾಲಯ ನೀಡಿದೆ. ತಾಯಿ ಮತ್ತು ಮಗನ ನಡುವಿನ ಆಸ್ತಿ ವಿವಾದದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಎನ್.ಕೆ. ಸಿಂಗ್ ಅವರಿದ್ದ ಪೀಠವು ಅರ್ಜಿದಾರ ಮಗನ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಮಗ ಸಲ್ಲಿಸಿದ್ದ ವಿಶೇಷ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಪೀಠವು, “ನೀವು ತಕ್ಷಣವೇ ಹೋಗಿ ನಿಮ್ಮ ತಾಯಿಯ ಪಾದಗಳನ್ನು ಮುಟ್ಟಿ, ಮಾಡಿದ ಎಲ್ಲಾ ಪಾಪಗಳಿಗೆ ಪ್ರಾಯಶ್ಚಿತ್ತವಾಗಿ ಕ್ಷಮೆಯಾಚಿಸಬೇಕು” ಎಂದು ಕಡಕ್ ಆದೇಶ ನೀಡಿದೆ.

ದೆಹಲಿಯ ವೃದ್ಧ ದಂಪತಿಗಳು ತಮ್ಮ ಸ್ವಂತ ಆಸ್ತಿಯ ಮೊದಲ ಮಹಡಿಯಲ್ಲಿ ಮಗ ಹಾಗೂ ಸೊಸೆಗೆ ಯಾವುದೇ ಬಾಡಿಗೆ ಇಲ್ಲದೆ ವಾಸಿಸಲು ಪ್ರೀತಿಯಿಂದ ಅವಕಾಶ ನೀಡಿದ್ದರು. ಆದರೆ ಮಗ ಮತ್ತು ಸೊಸೆ ಸೇರಿಕೊಂಡು ನಕಲಿ ದಾಖಲೆಗಳನ್ನು ಸೃಷ್ಟಿಸಿ, ಇಡೀ ಆಸ್ತಿಯನ್ನು ತಮ್ಮ ಹೆಸರಿಗೆ ವರ್ಗಾಯಿಸುವಂತೆ ವೃದ್ಧ ಪೋಷಕರಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲು ಆರಂಭಿಸಿದ್ದರು. ಮಗನ ಈ ಅಮಾನವೀಯ ವರ್ತನೆಯಿಂದ ಬೇಸತ್ತ ಹೆತ್ತವರು ಆತನ ವಿರುದ್ಧ ಎಫ್ಐಆರ್ ದಾಖಲಿಸಿ, ಪತ್ರಿಕಾ ಪ್ರಕಟಣೆಯ ಮೂಲಕ ಎಲ್ಲಾ ಸಂಬಂಧಗಳನ್ನು ಕಡಿತಗೊಳಿಸಿ ಮನೆಯಿಂದ ಹೊರಹೋಗುವಂತೆ ನೋಟಿಸ್ ನೀಡಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ್ದ ಕೆಳಹಂತದ ನ್ಯಾಯಾಲಯ ಹಾಗೂ ದೆಹಲಿ ಹೈಕೋರ್ಟ್‌ಗಳು, ಆಸ್ತಿಯ ಸಂಪೂರ್ಣ ಮಾಲೀಕತ್ವ ಪೋಷಕರಿಗೇ ಸೇರಿದ್ದು ಎಂದು ತೀರ್ಪು ನೀಡಿ ಮಗನನ್ನು ತಕ್ಷಣ ಮನೆ ಖಾಲಿ ಮಾಡುವಂತೆ ಹೇಳಿದ್ದವು. ಇದನ್ನು ಪ್ರಶ್ನಿಸಿ ಮಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದನು. ವಿಚಾರಣೆ ವೇಳೆ ನ್ಯಾಯಮೂರ್ತಿಗಳು, ಹೆತ್ತ ತಾಯಿಗೆ ದ್ರೋಹ ಬಗೆಯುತ್ತಿರುವ ಮಗನ ನಡೆಗೆ ತೀವ್ರ ಬೇಸರ ವ್ಯಕ್ತಪಡಿಸಿ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದರು ಮತ್ತು ಕಾನೂನು ಹೋರಾಟ ಬಿಟ್ಟು ತಾಯಿಯ ಆಶೀರ್ವಾದ ಪಡೆಯುವಂತೆ ಬುದ್ಧಿಮಾತು ಹೇಳಿದ್ದಾರೆ. ಸುಪ್ರೀಂಕೋರ್ಟ್​ನ ಈ ನಡೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಮೆಚ್ಚುಗೆ ಕೇಳಿ ಬಂದಿದೆ.