News Next Kannada

karnataka

ದಿನನಿತ್ಯದ ಬದುಕಿಗೆ ಹೆಗಲಾಗಿ ನಿಲ್ಲುವ ಜನಸಾಮಾನ್ಯರೊಂದಿಗೆ ಹುಟ್ಟುಹಬ್ಬ ಆಚರಿಸಿ ಸರಳತೆ ಮೆರೆದ ಸುನೀಲ್ ಕುಮಾರ್

ತಮ್ಮ ದೈನಂದಿನ ಬದುಕಿನಲ್ಲಿ ನಿರಂತರವಾಗಿ ನೆರವಾಗುವ ಜನಸಾಮಾನ್ಯರನ್ನೇ 'ವಿಶೇಷ ಬಂಧುಗಳು' ಎಂದು ಕರೆದು, ಅವರೊಂದಿಗೆ ಹುಟ್ಟುಹಬ್ಬ ಆಚರಿಸಿ ಸರಳತೆ ಮೆರೆದಿದ್ದಾರೆ.

By Suma G | ಸುಮಾ ಜಿ.
Photo: BJP Leader V Sunil Kumar Karkala Facebook

ಬೆಂಗಳೂರು: ರಾಜಕಾರಣಿಗಳು, ಜನಪ್ರತಿನಿಧಿಗಳ ಹುಟ್ಟುಹಬ್ಬವೆಂದರೆ ಸಾಮಾನ್ಯವಾಗಿ ಅದ್ದೂರಿ ವೇದಿಕೆಗಳು, ಬೃಹತ್ ಕೇಕ್, ಹಾರ-ತುರಾಯಿಗಳ ಸಂಭ್ರಮವೇ ಕಣ್ಣಮುಂದೆ ಬರುತ್ತದೆ. ಆದರೆ ಬಿಜೆಪಿ ನಾಯಕ, ಮಾಜಿ ಸಚಿವ ವಿ. ಸುನೀಲ್ ಕುಮಾರ್ ತಮ್ಮ ಹುಟ್ಟುಹಬ್ಬವನ್ನು ತೀರಾ ವಿಭಿನ್ನ ಹಾಗೂ ಅರ್ಥಪೂರ್ಣವಾಗಿ ಆಚರಿಸಿಕೊಳ್ಳುವ ಮೂಲಕ ಜನರ ಗಮನ ಸೆಳೆದಿದ್ದಾರೆ. ತಮ್ಮ ದೈನಂದಿನ ಬದುಕಿನಲ್ಲಿ ನಿರಂತರವಾಗಿ ನೆರವಾಗುವ ಜನಸಾಮಾನ್ಯರನ್ನೇ 'ವಿಶೇಷ ಬಂಧುಗಳು' ಎಂದು ಕರೆದು, ಅವರೊಂದಿಗೆ ಹುಟ್ಟುಹಬ್ಬ ಆಚರಿಸಿ ಸರಳತೆ ಮೆರೆದಿದ್ದಾರೆ.

ತಮ್ಮ ದಿನನಿತ್ಯದ ಅಗತ್ಯಗಳಿಗೆ ಸ್ಪಂದಿಸುವ ಹಿರಿಯ ದಿನಸಿ ವ್ಯಾಪಾರಿ ದೇವಣ್ಣ, ಆರೋಗ್ಯ ಕಾಳಜಿ ವಹಿಸುವ ವೈದ್ಯರಾದ ಡಾ. ಕಾರ್ತಿಕ್ ರಾವ್ ಹಾಗೂ ಡಾ. ಮೃಣಾಲ್, ಮನೆಗೆ ಹಾಲು-ಪತ್ರಿಕೆ ತಲುಪಿಸುವವರು, ತರಕಾರಿ-ಹೂ-ಹಣ್ಣು, ಮೀನು-ಮಾಂಸ ಪೂರೈಸುವವರು, ಕಸ ಸಂಗ್ರಹಕಾರರು, ತುರ್ತು ಪ್ರಯಾಣಕ್ಕೆ ನೆರವಾಗುವ ಆಟೋ ಚಾಲಕರು, ಟೈಲರ್, ಇಸ್ತ್ರಿ ಮಾಡುವವರು, ಎಲೆಕ್ಟ್ರಿಷಿಯನ್, ಕೇಬಲ್ ಆಪರೇಟರ್ ಹಾಗೂ ಮಗನ ಟ್ಯೂಷನ್ ಶಿಕ್ಷಕರನ್ನು ಮನೆಗೆ ಆಹ್ವಾನಿಸಿ ಅವರೊಂದಿಗೆ ಸುನೀಲ್ ಕುಮಾರ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಎಲ್ಲರೊಂದಿಗೆ ಕುಶಲೋಪರಿ ವಿಚಾರಿಸಿ, ಸಹಭೋಜನ ಸವಿದು ಸಂಭ್ರಮ ಹಂಚಿಕೊಂಡಿದ್ದಾರೆ.

WhatsApp Image 2026-08-15 at 17.37.15

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿರುವ ಅವರು, "ನಮ್ಮ ಬದುಕನ್ನು ಸುಂದರವಾಗಿಸುವುದು ದೊಡ್ಡ ದೊಡ್ಡ ಸಂಬಂಧಗಳಷ್ಟೇ ಅಲ್ಲ, ಪ್ರತಿನಿತ್ಯದ ಬದುಕಿನಲ್ಲಿ ಬೆಸೆದುಕೊಳ್ಳುವ ಇಂತಹ ಸಣ್ಣ ಸಣ್ಣ ಆತ್ಮೀಯತೆಗಳೇ ನಿಜವಾದ ಬಾಂಧವ್ಯಗಳು. ಹುಟ್ಟುಹಬ್ಬದ ಸಂಭ್ರಮಕ್ಕಿಂತ, ಪ್ರತಿನಿತ್ಯ ನನ್ನ ಹಾಗೂ ನನ್ನ ಕುಟುಂಬದ ಜೊತೆಗೆ ನಿಂತವರೊಂದಿಗೆ ಕೆಲವು ಹೊತ್ತು ಬೆರೆತು ಸಂತೋಷ ಹಂಚಿಕೊಂಡ ಕ್ಷಣವೇ ಈ ಹುಟ್ಟುಹಬ್ಬದ ನಿಜವಾದ ವಿಶೇಷತೆ" ಎಂದು ಹಂಚಿಕೊಂಡಿದ್ದಾರೆ.

ರಾಜಕೀಯ ಪ್ರಭಾವ, ಆಡಂಬರಗಳಿಲ್ಲದೆ, ಬದುಕಿನ ನೈಜ ಕಾಯಕಯೋಗಿಗಳನ್ನು ಗುರುತಿಸಿ ಗೌರವಿಸಿದ ಸುನೀಲ್ ಕುಮಾರ್ ಅವರ ಈ ನಡೆ ಸಾರ್ವಜನಿಕ ವಲಯದಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.