News Next Kannada

karnataka

ಬಿಪಿಎಲ್ ಕಾರ್ಡ್‌ದಾರರಿಗೆ ಆಹಾರ ಇಲಾಖೆಯಿಂದ ಮಹತ್ವದ ಸೂಚನೆ: ಸೆಪ್ಟೆಂಬರ್ 30 ಒಳಗೆ ಈ ಕೆಲಸ ಮಾಡೋದು ಕಡ್ಡಾಯ

ಕರ್ನಾಟಕದಲ್ಲಿ ಪಡಿತರ ಚೀಟಿಗಳ ರದ್ದತಿಯಿಂದ ಆತಂಕಗೊಂಡಿದ್ದ ಸಾರ್ವಜನಿಕರಿಗೆ ರಾಜ್ಯ ಸರ್ಕಾರವು ನೆಮ್ಮದಿಯ ಸುದ್ದಿ ನೀಡಿದೆ.

By ರಶ್ಮಿ ಎಸ್. | Rashmi S
BPL Cardholders Must Complete This Process by September 30 Says Food Department

ಕರ್ನಾಟಕದಲ್ಲಿ ಪಡಿತರ ಚೀಟಿಗಳ ರದ್ದತಿಯಿಂದ ಆತಂಕಗೊಂಡಿದ್ದ ಸಾರ್ವಜನಿಕರಿಗೆ ರಾಜ್ಯ ಸರ್ಕಾರವು ನೆಮ್ಮದಿಯ ಸುದ್ದಿ ನೀಡಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ನೂತನ ಸಚಿವರಾದ ರಿಜ್ವಾನ್ ಅರ್ಷದ್ ಅವರು ಸಾರ್ವಜನಿಕರ ಹಿತದೃಷ್ಟಿಯಿಂದ ಬಿಪಿಎಲ್ ಕಾರ್ಡ್‌ಗಳ ರದ್ದತಿ ಹಾಗೂ ಅವುಗಳ ಪರಿಷ್ಕರಣೆ ಪ್ರಕ್ರಿಯೆಯನ್ನು ಸದ್ಯಕ್ಕೆ ತಾತ್ಕಾಲಿಕವಾಗಿ ತಡೆಹಿಡಿಯಲು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಆದರೆ, ರಾಜ್ಯದಲ್ಲಿರುವ ಒಟ್ಟು 2.65 ಕೋಟಿ ಪಡಿತರ ಫಲಾನುಭವಿಗಳು ಕಡ್ಡಾಯವಾಗಿ ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ, ಮುಂಬರುವ ಸೆಪ್ಟೆಂಬರ್ 30ರ ಒಳಗಾಗಿ ತಮ್ಮ ಇ-ಕೆವೈಸಿ  ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕೆಂದು ಸಚಿವರು ತಿಳಿಸಿದ್ದಾರೆ.

ಈ ನಿಗದಿತ ಅವಧಿಯೊಳಗೆ ಇ-ಕೆವೈಸಿ ಮಾಡಿಸಿಕೊಳ್ಳದಿದ್ದರೆ ಅಂತಹ ಕಾರ್ಡ್‌ಗಳನ್ನು ರದ್ದುಪಡಿಸಲಾಗುವುದು. ಈ ಪ್ರಕ್ರಿಯೆಯ ನಂತರ ಎಷ್ಟು ಬೋಗಸ್ ಕಾರ್ಡ್‌ಗಳು ಪತ್ತೆಯಾಗುತ್ತವೆ ಎಂಬುದನ್ನು ಆಧರಿಸಿ, ಅರ್ಹತೆ ಹೊಂದಿರುವ ಹೊಸ ಅರ್ಜಿದಾರರಿಗೆ ಹೊಸದಾಗಿ ಬಿಪಿಎಲ್ ಪಡಿತರ ಚೀಟಿಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮತ್ತೊಂದೆಡೆ, ಅನ್ನಭಾಗ್ಯ ಯೋಜನೆಯಡಿ ವಿತರಿಸಲಾಗುವ ಅಕ್ಕಿಯು ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ಮತ್ತು ಪಡಿತರ ಸೋರಿಕೆಯನ್ನು ತಡೆಗಟ್ಟಲು ಸರ್ಕಾರವು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರುತ್ತಿದೆ.

ಇದಕ್ಕಾಗಿ ಆಹಾರ ಧಾನ್ಯಗಳನ್ನು ಸಂಗ್ರಹಿಸುವ ಎಲ್ಲಾ ಗೋದಾಮುಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಮತ್ತು ಆಹಾರ ಸಾಮಗ್ರಿಗಳನ್ನು ಸಾಗಿಸುವ ಪ್ರತಿಯೊಂದು ವಾಹನಕ್ಕೂ ಜಿಪಿಎಸ್ ಸಾಧನಗಳನ್ನು ಅಳವಡಿಸಿ ಕಮಾಂಡ್ ಸೆಂಟರ್ ಮೂಲಕ ಕಣ್ಗಾವಲು ಇಡಲಾಗುವುದು.

ಇದರೊಂದಿಗೆ, ನ್ಯಾಯಬೆಲೆ ಅಂಗಡಿಗಳಲ್ಲಿ ಗ್ರಾಹಕರಿಂದ ಬಯೋಮೆಟ್ರಿಕ್ ಹೆಬ್ಬೆರಳ ಗುರುತು ಪಡೆದ ತಕ್ಷಣವೇ ಪಡಿತರ ಧಾನ್ಯಗಳನ್ನು ವಿತರಿಸಬೇಕು ಎಂದು ಇಲಾಖೆ ಕಟ್ಟುನಿಟ್ಟಿನ ನಿಯಮ ಮಾಡಿದೆ. ಬಯೋಮೆಟ್ರಿಕ್ ಪಡೆದ ನಂತರವೂ ಸಾರ್ವಜನಿಕರನ್ನು ಕಾಯಿಸುವ ಅಥವಾ ಬೇರೆ ದಿನ ಬರುವಂತೆ ಸತಾಯಿಸುವ ನ್ಯಾಯಬೆಲೆ ಅಂಗಡಿಗಳ ಮಾಲೀಕರ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆಹಾರ ಇಲಾಖೆಯ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.