Kannada News Next

karnataka

ಕರಾವಳಿಯಲ್ಲಿ ಮತ್ತೆ ಅಬ್ಬರಿಸಲಿದೆ ಮಳೆ: ಫೆಸಿಪಿಕ್​ ಸಾಗರದಲ್ಲಿ ಪ್ರಬಲ ಚಂಡಮಾರುತ, ಅರಬ್ಬಿ ಸಮುದ್ರದಲ್ಲಿ ಮುಂಗಾರು ದುರ್ಬಲ

ಕರ್ನಾಟಕ ರಾಜ್ಯದಲ್ಲಿ ಸದ್ಯ ಮುಂಗಾರು ಮಳೆಯ ತೀವ್ರತೆಯು ತುಸು ಕಡಿಮೆಯಾಗುವ ಮುನ್ಸೂಚನೆಗಳು ಗೋಚರಿಸುತ್ತಿವೆ.

By ರಶ್ಮಿ ಎಸ್. | Rashmi S
coastal karnataka heavy rain pacific cyclone weather-update

ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿ ಸದ್ಯ ಮುಂಗಾರು ಮಳೆಯ ತೀವ್ರತೆಯು ತುಸು ಕಡಿಮೆಯಾಗುವ ಮುನ್ಸೂಚನೆಗಳು ಗೋಚರಿಸುತ್ತಿವೆ. ಪೆಸಿಫಿಕ್ ಸಾಗರದ ಜಪಾನ್ ಕರಾವಳಿ ಭಾಗದಲ್ಲಿ ತಲೆದೋರಿರುವ ಶಕ್ತಿಶಾಲಿ ಚಂಡಮಾರುತದ ನೇರ ಪ್ರಭಾವವು ಹಿಂದೂ ಮಹಾಸಾಗರ ಹಾಗೂ ಅರಬ್ಬಿ ಸಮುದ್ರದ ಮೇಲಾಗುತ್ತಿದೆ.

ಇದರಿಂದಾಗಿ ಅರಬ್ಬಿ ಸಮುದ್ರದ ಕಡೆಗೆ ಬರಬೇಕಿದ್ದ ತೇವಾಂಶಭರಿತ ಮಾರುತಗಳು ದಿಕ್ಕು ಬದಲಿಸಿ ಬಂಗಾಳಕೊಲ್ಲಿಯ ಮೂಲಕ ಬೇರೆ ದೇಶಗಳತ್ತ ಸಾಗುತ್ತಿರುವುದರಿಂದ, ರಾಜ್ಯದಲ್ಲಿ ಮುಂಗಾರು ದುರ್ಬಲಗೊಳ್ಳುವ ಸಾಧ್ಯತೆಯಿದೆ.

ಆದಾಗ್ಯೂ, ಹವಾಮಾನ ಇಲಾಖೆಯ ಪ್ರಕಾರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಸಾಧಾರಣದಿಂದ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಕರಾವಳಿಯ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಆಗಸ್ಟ್ 12ರವರೆಗೆ ಬಿಟ್ಟುಬಿಟ್ಟು ಉತ್ತಮ ಮಳೆಯಾಗಲಿದೆ.

ಮಲೆನಾಡಿನ ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಆಗಸ್ಟ್ 10ರವರೆಗೆ ಸಾಧಾರಣ ಮಳೆಯ ವಾತಾವರಣ ಮುಂದುವರಿಯಲಿದೆ.

ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ರಾಯಚೂರು ಸೇರಿದಂತೆ ಪ್ರಮುಖ ಜಿಲ್ಲೆಗಳಲ್ಲಿ ಆಗಸ್ಟ್ 9ರವರೆಗೆ ಅಲ್ಲಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು, ಮೈಸೂರು ಸೇರಿದಂತೆ ದಕ್ಷಿಣ ಒಳನಾಡಿನ ಭಾಗಗಳಲ್ಲಿ ಮುಂದಿನ ಹತ್ತು ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ.

ಮುಖ್ಯವಾಗಿ ಆಗಸ್ಟ್ 6 ರಿಂದ 9 ರ ಅವಧಿಯಲ್ಲಿ ಕರಾವಳಿ ಭಾಗದಲ್ಲಿ ವರುಣನ ಅಬ್ಬರ ಹೆಚ್ಚಾಗಲಿದ್ದು, ಸಮುದ್ರದ ಅಲೆಗಳ ತೀವ್ರತೆ ಹೆಚ್ಚಿರಲಿದೆ. ಈ ಕಾರಣದಿಂದಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸಾರ್ವಜನಿಕರು ಸಿಡಿಲು ಮತ್ತು ತೀವ್ರ ಗಾಳಿಯ ಸಮಯದಲ್ಲಿ ಮರಗಳ ಕೆಳಗೆ ಆಶ್ರಯ ಪಡೆಯದೆ, ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಇಲಾಖೆಯು ಎಚ್ಚರಿಸಿದೆ.