Kannada News Next

karnataka

ವಿವಾಹಿತ ಒಬಿಸಿ ಅಭ್ಯರ್ಥಿಗಳಿಗೆ ಗುಡ್​ನ್ಯೂಸ್​: ಆದಾಯ ಪ್ರಮಾಣ ಪತ್ರಕ್ಕೆ ಹೊಸ ರೂಲ್ಸ್ ಜಾರಿ

ರಾಜ್ಯ ಸರ್ಕಾರಿ ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ಮೀಸಲಾತಿ ಕೋರುವ ಹಿಂದುಳಿದ ವರ್ಗಗಳ ವಿವಾಹಿತ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರವು ಅತ್ಯಂತ ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದೆ.

By ರಶ್ಮಿ ಎಸ್. | Rashmi S
OBCIncomeCertificate

ರಾಜ್ಯ ಸರ್ಕಾರಿ ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ಮೀಸಲಾತಿ ಕೋರುವ ಹಿಂದುಳಿದ ವರ್ಗಗಳ ವಿವಾಹಿತ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರವು ಅತ್ಯಂತ ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದೆ. ವಿವಾಹಿತ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಗೆ ಜಾತಿ ಹಾಗೂ ಆದಾಯ ಪ್ರಮಾಣ ಪತ್ರಗಳನ್ನು ವಿತರಿಸುವ ನಿಯಮಾವಳಿಗಳಲ್ಲಿ ಪ್ರಮುಖ ಬದಲಾವಣೆಗಳನ್ನು ತರಲಾಗಿದ್ದು, ಈ ಕುರಿತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಅಧಿಕೃತ ಆದೇಶ ಹೊರಡಿಸಿದೆ.

ಹೊಸ ನಿಯಮದ ಪ್ರಕಾರ, ವಿವಾಹಿತ ಅರ್ಜಿದಾರರ ವಾರ್ಷಿಕ ಆದಾಯವನ್ನು ಲೆಕ್ಕ ಹಾಕುವ ವಿಧಾನವನ್ನು ಸರಳಗೊಳಿಸಲಾಗಿದೆ. ಇನ್ನು ಮುಂದೆ ಇಂತಹ ಅಭ್ಯರ್ಥಿಗಳ ಆದಾಯ ಪ್ರಮಾಣ ಪತ್ರ ನೀಡುವ ಸಂದರ್ಭದಲ್ಲಿ ಅವರ ತಂದೆ-ತಾಯಿಯ ಆದಾಯವನ್ನು ಯಾವುದೇ ಕಾರಣಕ್ಕೂ ಒಟ್ಟು ಆದಾಯಕ್ಕೆ ಸೇರಿಸಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಇದುವರೆಗೆ ಮದುವೆಯಾದ ಬಳಿಕವೂ ಪೋಷಕರ ಆದಾಯದ ವಿವರಗಳನ್ನು ನೀಡಬೇಕಾಗಿ ಬರುತ್ತಿದ್ದ ಗೊಂದಲ ಮತ್ತು ತೊಂದರೆಗಳಿಗೆ ಈ ಮೂಲಕ ತೆರೆಬಿದ್ದಂತಾಗಿದೆ.

ಮುಂದುವರಿದು, ಅಭ್ಯರ್ಥಿಗಳ ವಾಸಸ್ಥಳದ ಸ್ಥಿತಿಗತಿಯ ಆಧಾರದ ಮೇಲೆ ಆದಾಯವನ್ನು ವಿಭಾಗಿಸಲಾಗಿದೆ. ಒಂದು ವೇಳೆ ವಿವಾಹಿತ ದಂಪತಿಗಳು ಪ್ರತ್ಯೇಕವಾಗಿ ಸ್ವತಂತ್ರ ಕುಟುಂಬವಾಗಿ ವಾಸಿಸುತ್ತಿದ್ದರೆ, ಕೇವಲ ಪತಿ ಮತ್ತು ಪತ್ನಿಯ ಆದಾಯವನ್ನು ಮಾತ್ರ ಒಟ್ಟಾಗಿ ಪರಿಗಣಿಸಲಾಗುತ್ತದೆ.

ಆದರೆ, ಅರ್ಜಿದಾರರು ಅವಿಭಕ್ತ ಕುಟುಂಬದ ಭಾಗವಾಗಿ ಎಲ್ಲರ ಜೊತೆಯಲ್ಲಿ ವಾಸಿಸುತ್ತಿದ್ದರೆ, ಆ ಇಡೀ ಕುಟುಂಬದ ಒಟ್ಟು ವಾರ್ಷಿಕ ಆದಾಯವನ್ನು ಪ್ರಮಾಣ ಪತ್ರಕ್ಕಾಗಿ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಪ್ರವರ್ಗ-2ಎ, 2ಬಿ, 3ಎ ಮತ್ತು 3ಬಿ ಅಡಿಯಲ್ಲಿ ಬರುವ ಅಭ್ಯರ್ಥಿಗಳಿಗೆ ಕೆನೆಪದರ ಮಿತಿಗೆ ಸಂಬಂಧಿಸಿದಂತೆ ದೀರ್ಘಕಾಲದಿಂದ ಇದ್ದ ಗೊಂದಲಗಳನ್ನು ನಿವಾರಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ.

ಈ ನೂತನ ಸುಧಾರಣೆಯು ಅರ್ಹ ಅಭ್ಯರ್ಥಿಗಳಿಗೆ ಸಕಾಲದಲ್ಲಿ ಮೀಸಲಾತಿ ಸೌಲಭ್ಯ ಸಿಗುವಂತೆ ಮಾಡಲು ಮತ್ತು ಉದ್ಯೋಗಾವಕಾಶಗಳ ನೇಮಕಾತಿ ಪ್ರಕ್ರಿಯೆಯನ್ನು ಸುಗಮಗೊಳಿಸಲು ನೆರವಾಗಲಿದೆ.