Kannada News Next

karnataka

ಚಾರಣಪ್ರಿಯರ ಗಮನಕ್ಕೆ: ಟ್ರೆಕ್ಕಿಂಗ್ ಮಾಡಬೇಕಾದರೆ ಇನ್ಮುಂದೆ 'ಜಿಪಿಎಸ್' ಕಡ್ಡಾಯ

ಇನ್ಮುಂದೆ ರಾಜ್ಯದ ಯಾವುದೇ ಅರಣ್ಯ ವ್ಯಾಪ್ತಿಯಲ್ಲಿ ಚಾರಣ ಕೈಗೊಳ್ಳಬೇಕಾದರೂ ಜಿಪಿಎಸ್ ಸಾಧನವನ್ನು ಹೊಂದುವುದನ್ನು ಕಡ್ಡಾಯಗೊಳಿಸಲಾಗಿದೆ.

By ರಶ್ಮಿ ಎಸ್. | Rashmi S
gps tracking mandatory for trekkers karnataka

ಪ್ರಕೃತಿ ಸೌಂದರ್ಯವನ್ನು ಸವಿಯಲು ದಟ್ಟ ಕಾಡು ಹಾಗೂ ಬೆಟ್ಟಗುಡ್ಡಗಳತ್ತ ಮುಖ ಮಾಡುವ ಚಾರಣ ಪ್ರಿಯರಿಗೆ ಕರ್ನಾಟಕ ಅರಣ್ಯ ಇಲಾಖೆಯು ಹೊಸ ನಿಯಮವೊಂದನ್ನು ಜಾರಿಗೆ ತಂದಿದೆ. ಇನ್ಮುಂದೆ ರಾಜ್ಯದ ಯಾವುದೇ ಅರಣ್ಯ ವ್ಯಾಪ್ತಿಯಲ್ಲಿ ಚಾರಣ ಕೈಗೊಳ್ಳಬೇಕಾದರೂ ಜಿಪಿಎಸ್ ಸಾಧನವನ್ನು ಹೊಂದುವುದನ್ನು ಕಡ್ಡಾಯಗೊಳಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ವಾರಾಂತ್ಯದ ರಜೆ ಕಳೆಯಲು ಕಾಡುಗಳತ್ತ ಹೆಜ್ಜೆ ಇಡುವ ಹವ್ಯಾಸಿ ಚಾರಣಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಆದರೆ, ಸೂಕ್ತ ಮಾರ್ಗದರ್ಶನ ಹಾಗೂ ಮಾಹಿತಿ ಇಲ್ಲದೆ ದಟ್ಟಾರಣ್ಯ ಪ್ರವೇಶಿಸುವ ಹಲವರು ದಾರಿ ತಪ್ಪಿ ದಟ್ಟ ಕಾಡಿನಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಕೆಲವೊಮ್ಮೆ ವನ್ಯಮೃಗಗಳ ದಾಳಿಗೆ ಸಿಲುಕುವುದು, ಪ್ರಪಾತಕ್ಕೆ ಬೀಳುವುದು ಅಥವಾ ದಾರಿ ಸಿಗದೆ ದಿನಗಟ್ಟಲೆ ನಾಪತ್ತೆಯಾಗುವ ಘಟನೆಗಳು ಮರುಕಳಿಸುತ್ತಿವೆ. ಇಂತಹ ತುರ್ತು ಪರಿಸ್ಥಿತಿಗಳಲ್ಲಿ ದಟ್ಟವಾದ ಅರಣ್ಯದ ನಡುವೆ ಚಾರಣಿಗರು ಎಲ್ಲಿದ್ದಾರೆ ಎಂಬುದನ್ನು ಪತ್ತೆಹಚ್ಚುವುದು ಅರಣ್ಯ ಇಲಾಖೆ ಹಾಗೂ ರಕ್ಷಣಾ ಸಿಬ್ಬಂದಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಎಲ್ಲಾ ಗಂಭೀರ ಸಮಸ್ಯೆಗಳಿಗೆ ಬ್ರೇಕ್ ಹಾಕಲು ಮತ್ತು ಚಾರಣಿಗರ ಜೀವ ರಕ್ಷಣೆಗಾಗಿ ಇಲಾಖೆ ಈ ತಂತ್ರಜ್ಞಾನ ಆಧಾರಿತ ಕಠಿಣ ನಿರ್ಧಾರ ಕೈಗೊಂಡಿದೆ.

ಹೊಸ ನಿಯಮದ ಪ್ರಕಾರ, ಇಲಾಖೆಯಿಂದ ಅಧಿಕೃತ ಅನುಮತಿ ಪಡೆದ ಪ್ರತಿಯೊಂದು ಚಾರಣಿಗರ ತಂಡ ಅಥವಾ ವೈಯಕ್ತಿಕ ಚಾರಣಿಗರು ತಮ್ಮ ಪ್ರಯಾಣದ ಅವಧಿಯಲ್ಲಿ ಜಿಪಿಎಸ್ ಟ್ರ್ಯಾಕರ್ ಸಾಧನವನ್ನು ಕಡ್ಡಾಯವಾಗಿ ಧರಿಸಿರಬೇಕು ಅಥವಾ ತಮ್ಮ ಬಳಿ ಇಟ್ಟುಕೊಳ್ಳಬೇಕು. ಇದರಿಂದಾಗಿ ಅವರು ಕಾಡಿನ ಯಾವ ಭಾಗದಲ್ಲಿದ್ದಾರೆ, ಯಾವ ಮಾರ್ಗದಲ್ಲಿ ಚಲಿಸುತ್ತಿದ್ದಾರೆ ಎಂಬುದನ್ನು ಅರಣ್ಯ ಸಿಬ್ಬಂದಿ ಕಂಟ್ರೋಲ್ ರೂಂ ಮೂಲಕ ನಿಖರವಾಗಿ ಗಮನಿಸಬಹುದಾಗಿದೆ. ಒಂದು ವೇಳೆ ಚಾರಣಿಗರು ನಿಗದಿತ ಹಾದಿ ತಪ್ಪಿದರೆ ಅಥವಾ ಅಪಾಯಕ್ಕೆ ಸಿಲುಕಿದರೆ ತಕ್ಷಣವೇ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಲು ಇದು ಸಹಕಾರಿಯಾಗಲಿದೆ. ಈ ನಿಯಮವು ಕಾಡಿನ ರಕ್ಷಣೆ ಹಾಗೂ ಪ್ರವಾಸಿಗರ ಸುರಕ್ಷತೆ ಎರಡರ ದೃಷ್ಠಿಯಿಂದಲೂ ಉತ್ತಮ ನಿರ್ಧಾರವಾಗಿದೆ.