ಗೃಹಜ್ಯೋತಿ ಯೋಜನೆ: ಸುಮಾರು 1.3 ಲಕ್ಷ ಗ್ರಾಹಕರು ಉಚಿತ ವಿದ್ಯುತ್ ಸೌಲಭ್ಯದಿಂದ ಹೊರಕ್ಕೆ
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಜ್ಯೋತಿ ಯೋಜನೆಯಿಂದ ಕರ್ನಾಟಕದಾದ್ಯಂತ ಸುಮಾರು 1.3 ಲಕ್ಷ ವಿದ್ಯುತ್ ಗ್ರಾಹಕರು ಸ್ವಯಂಪ್ರೇರಿತರಾಗಿ ಹೊರನಡೆದಿದ್ದಾರೆ. ಈ ಯೋಜನೆಯಡಿ ಪ್ರತಿ ತಿಂಗಳು 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಸೌಲಭ್ಯವನ್ನು ನೀಡಲಾಗುತ್ತಿದೆ.
ಕಳೆದ ಮೂರು ವರ್ಷಗಳಿಂದ ಗೃಹಜ್ಯೋತಿ ಯೋಜನೆಯ ಲಾಭ ಪಡೆಯುತ್ತಿದ್ದರೂ, ಇದೀಗ ಇಂಧನ ಇಲಾಖೆಯು ನಡೆಸುತ್ತಿರುವ ಮನೆ ಮನೆಗೆ ತೆರಳಿ ಪರಿಶೀಲನೆ (Door-to-Door Verification) ವೇಳೆ ವೈಯಕ್ತಿಕ ದಾಖಲೆಗಳನ್ನು ಸಲ್ಲಿಸಲು ನಿರಾಕರಿಸಿದ ಕಾರಣ ಹಲವು ಗ್ರಾಹಕರು ಯೋಜನೆಯಿಂದ ಹೊರಬರಲು ನಿರ್ಧರಿಸಿದ್ದಾರೆ.
ಗೃಹಜ್ಯೋತಿ ಯೋಜನೆ ಸಿಬ್ಬಂದಿಗಗಳಿಗೆ ವೈಯಕ್ತಿಕ ದಾಖಲೆಗಳನ್ನು ನೀಡುವುದರಿಂದ ಗೌಪ್ಯತೆ ಸಮಸ್ಯೆ ಎದುರಾಗಬಹುದು ಎಂಬ ಆತಂಕದಿಂದ ಕೆಲ ಗ್ರಾಹಕರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗೃಹಜ್ಯೋತಿ ಯೋಜನೆಯಿಂದ ಹೊರನಡೆಯುತ್ತಿರುವ ಗ್ರಾಹಕರ ಪೈಕಿ ಅತಿ ಹೆಚ್ಚು ಮಂದಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ವ್ಯಾಪ್ತಿಯವರಾಗಿದ್ದಾರೆ. ಒಟ್ಟು 1.3 ಲಕ್ಷ ಗ್ರಾಹಕರಲ್ಲಿ 1.2 ಲಕ್ಷಕ್ಕೂ ಹೆಚ್ಚು ಮಂದಿ BESCOM ವ್ಯಾಪ್ತಿಗೆ ಸೇರಿದವರಾಗಿದ್ದಾರೆ.
ಪರಿಶೀಲನೆ ವೇಳೆ ಅರ್ಹತೆಯನ್ನು ದೃಢಪಡಿಸಲು ಗ್ರಾಹಕರಿಂದ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಹಾಗೂ ಮತದಾರರ ಗುರುತಿನ ಚೀಟಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದರು. ಆದರೆ ವಿಶೇಷವಾಗಿ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವ ಹಲವು ಗ್ರಾಹಕರು ವೈಯಕ್ತಿಕ ಮಾಹಿತಿಯ ದುರ್ಬಳಕೆಯ ಭಯದಿಂದ ದಾಖಲೆ ನೀಡಲು ನಿರಾಕರಿಸಿದ್ದಾರೆ.
ಕರ್ನಾಟಕದಲ್ಲಿ ಒಟ್ಟು ಸುಮಾರು 2.1 ಕೋಟಿ ಗೃಹ ವಿದ್ಯುತ್ ಗ್ರಾಹಕರಿದ್ದು, ಇವರಲ್ಲಿ ಸುಮಾರು 1.8 ಕೋಟಿ ಮಂದಿ ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಆದರೆ ಪರಿಶೀಲನಾ ಅಭಿಯಾನದ ವೇಳೆ ಸುಮಾರು 25.7 ಲಕ್ಷ ಫಲಾನುಭವಿಗಳು ಲಭ್ಯವಾಗಿಲ್ಲ ಅಥವಾ ಅಗತ್ಯ ದಾಖಲೆಗಳನ್ನು ಸಲ್ಲಿಸಿಲ್ಲ ಎಂದು ತಿಳಿದುಬಂದಿದೆ.
ಅರ್ಹ ಗ್ರಾಹಕರು ಯೋಜನೆಯ ಸೌಲಭ್ಯ ಕಳೆದುಕೊಳ್ಳದಂತೆ ಇಂಧನ ಇಲಾಖೆ ಅಂತಿಮ ಅವಕಾಶವನ್ನು ನೀಡಿದೆ. ಮನೆ ಪರಿಶೀಲನೆ ವೇಳೆ ಲಭ್ಯವಾಗದ ಗ್ರಾಹಕರು ತಮ್ಮ ಸಮೀಪದ ವಿದ್ಯುತ್ ಉಪವಿಭಾಗ ಕಚೇರಿಗೆ ತೆರಳಿ ಅಕ್ಟೋಬರ್ 31ರೊಳಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಬಹುದು.
ದಾಖಲೆ ನೀಡಲು ನಿರಾಕರಿಸಿರುವ ಗ್ರಾಹಕರ ವಿವರಗಳನ್ನು ಅಧಿಕಾರಿಗಳು ಸಂಗ್ರಹಿಸುತ್ತಿದ್ದು, ಈ ವರದಿಯನ್ನು ಇಂಧನ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುತ್ತದೆ. ಬಳಿಕ ಇಂತಹ ಫಲಾನುಭವಿಗಳ ಕುರಿತು ಮುಂದಿನ ಕ್ರಮವನ್ನು ಸರ್ಕಾರ ನಿರ್ಧರಿಸಲಿದೆ.
BESCOM ವ್ಯಾಪ್ತಿಯ 69 ಲಕ್ಷ ಗೃಹಜ್ಯೋತಿ ಫಲಾನುಭವಿಗಳ ಪೈಕಿ 16 ಲಕ್ಷ ಮಂದಿ ಇನ್ನೂ ಪರಿಶೀಲನೆ ಪೂರ್ಣಗೊಳಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಲವು ಸಂದರ್ಭಗಳಲ್ಲಿ ಮನೆಗಳು ಬೀಗ ಹಾಕಿದ್ದರಿಂದ ಅಥವಾ ಬಾಡಿಗೆದಾರರು ಬೇರೆಡೆಗೆ ಸ್ಥಳಾಂತರಗೊಂಡಿದ್ದರಿಂದ ಸಿಬ್ಬಂದಿಗೆ ಪರಿಶೀಲನೆ ನಡೆಸಲು ಸಾಧ್ಯವಾಗಿಲ್ಲ.
ಇನ್ನೂ ಪರಿಶೀಲನೆ ಪೂರ್ಣಗೊಳಿಸದ ಗ್ರಾಹಕರು ಅಕ್ಟೋಬರ್ 31ರೊಳಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು ಎಂದು ಇಂಧನ ಇಲಾಖೆ ಮತ್ತೊಮ್ಮೆ ಸ್ಪಷ್ಟಪಡಿಸಿದೆ.