ಬೆಂಗಳೂರು : ಕರ್ನಾಟಕದಲ್ಲಿ ದ್ವಿಚಕ್ರ ವಾಹನ ಸವಾರರ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸಲು ಸಾರಿಗೆ ಇಲಾಖೆಯು ಅತ್ಯಂತ ಕಠಿಣ ಕ್ರಮಕ್ಕೆ ಮುಂದಾಗಿದೆ. ಇನ್ಮುಂದೆ ಕೇವಲ ಹೆಸರಿಗಷ್ಟೇ ಧರಿಸುವ, ಸವಾರರ ಪ್ರಾಣಕ್ಕೆ ರಕ್ಷಣೆ ನೀಡದ ಹಾಫ್ ಹೆಲ್ಮೆಟ್ (Half Helmet Ban) ಗಳ ಬಳಕೆಗೆ ಸಂಪೂರ್ಣವಾಗಿ ಬ್ರೇಕ್ ಹಾಕಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಸಂಭವಿಸುವ ಬೈಕ್ ಅಪಘಾತಗಳಲ್ಲಿ ಹಾಫ್ ಹೆಲ್ಮೆಟ್ ಧರಿಸಿದ ಸವಾರರು ತಲೆಗೆ ತೀವ್ರ ಪೆಟ್ಟು ಮಾಡಿಕೊಂಡು ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕಳಪೆ ಗುಣಮಟ್ಟದ ಹಾಗೂ ಅರ್ಧ ತಲೆಯನ್ನು ಮಾತ್ರ ಮುಚ್ಚುವ ಇಂತಹ ಅಸುರಕ್ಷಿತ ಹೆಲ್ಮೆಟ್‌ಗಳ ಉತ್ಪಾದನೆಯನ್ನೇ ಬೇರುಸಹಿತ ನಿಲ್ಲಿಸಲು ಸರ್ಕಾರ ನಿರ್ಧರಿಸಿದೆ.
ಹಾಫ್ ಹೆಲ್ಮೆಟ್‌ಗಳನ್ನು ಸಿದ್ಧಪಡಿಸುವ ಕಾರ್ಖಾನೆಗಳು ಮತ್ತು ಮಾರಾಟ ಮಾಡುವ ಘಟಕಗಳ ಮೇಲೆ ದಾಳಿ ನಡೆಸಿ, ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಕಡಕ್ ಎಚ್ಚರಿಕೆ ನೀಡಿದ್ದಾರೆ.
ಕೇವಲ ಹೆಲ್ಮೆಟ್ ನಿಯಮ ಮಾತ್ರವಲ್ಲದೆ, ಇನ್ಮುಂದೆ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರಿಗೂ ಸಾರಿಗೆ ಇಲಾಖೆ ಬಿಸಿ ಮುಟ್ಟಿಸಲಿದೆ. ರಸ್ತೆಗಳಲ್ಲಿ ಅಪಾಯಕಾರಿಯಾಗಿ ಬೈಕ್ ಚಲಾಯಿಸುವವರು ಹಾಗೂ ಪದೇ ಪದೇ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವ ಸವಾರರ ಚಾಲನಾ ಪರವಾನಗಿಯನ್ನು ನೇರವಾಗಿ ಅಮಾನತು ಮಾಡಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ.
ಅಷ್ಟೇ ಅಲ್ಲದೆ, ಅಂತಹ ವಾಹನಗಳನ್ನು ಕಪ್ಪು ಪಟ್ಟಿಗೆ ಸೇರಿಸುವ ಮೂಲಕ ಕಠಿಣ ಸಂದೇಶ ರವಾನಿಸಲು ಸಾರಿಗೆ ಇಲಾಖೆಯ ಉನ್ನತ ಮಟ್ಟದ ಸಭೆಯಲ್ಲಿ ಚರ್ಚಿಸಲಾಗಿದೆ.
ಒಟ್ಟಾರೆಯಾಗಿ, ಬೈಕ್ ಸವಾರರ ಅಮೂಲ್ಯ ಪ್ರಾಣ ಉಳಿಸಲು ಸರ್ಕಾರ ಮುಂದಾಗಿದೆ. ಇನ್ಮುಂದೆ ಐಎಸ್‌ಐ ಮುದ್ರೆ ಹೊಂದಿರುವ ಪೂರ್ಣ ಪ್ರಮಾಣದ ಸುರಕ್ಷಿತ ಹೆಲ್ಮೆಟ್‌ಗಳನ್ನು ಧರಿಸುವುದು ಕಡ್ಡಾಯವಾಗಲಿದೆ. ನಿಯಮ ಮೀರಿದರೆ ಜೇಬಿಗೆ ಕತ್ತರಿ ಬೀಳುವುದು ಗ್ಯಾರಂಟಿ.