Kannada News Next

karnataka

ವಾಯುಭಾರ ಕುಸಿತದ ಎಫೆಕ್ಟ್ : ಸೆಪ್ಟೆಂಬರ್ 23, 24ರಂದು ಇಡೀ ರಾಜ್ಯಾದ್ಯಂತ ಭಾರಿ ಮಳೆ, ಕರಾವಳಿಗೆ ರೆಡ್ ಅಲರ್ಟ್ ಭೀತಿ

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಹವಾಮಾನ ವೈಪರೀತ್ಯ ಹಾಗೂ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಇಡೀ ಕರ್ನಾಟಕದಲ್ಲಿ ಮುಂದಿನ ಒಂದು ವಾರದ ಕಾಲ ಮಳೆಯ ಚಟುವಟಿಕೆಗಳು ಗರಿಷ್ಠ ಮಟ್ಟದಲ್ಲಿ ಚುರುಕಾಗಲಿವೆ

By ರಶ್ಮಿ ಎಸ್. | Rashmi S
karnataka-heavy-rain-alert-bay-of-bengal-depression-september-23-24

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಹವಾಮಾನ ವೈಪರೀತ್ಯ ಹಾಗೂ ತೀವ್ರ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಇಡೀ ಕರ್ನಾಟಕದಲ್ಲಿ ಮುಂದಿನ ಒಂದು ವಾರದ ಕಾಲ ಮಳೆಯ ಚಟುವಟಿಕೆಗಳು ಗರಿಷ್ಠ ಮಟ್ಟದಲ್ಲಿ ಚುರುಕಾಗಲಿವೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪ್ರಮುಖವಾಗಿ ಸೆಪ್ಟೆಂಬರ್ 23 ಮತ್ತು 24 ರಂದು ರಾಜ್ಯದಾದ್ಯಂತ ವ್ಯಾಪಕ ಮಳೆಯಾಗಲಿದ್ದು, ಕರಾವಳಿ ಜಿಲ್ಲೆಗಳಿಗೆ ಅತ್ಯಂತ ಭಾರಿ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ.

ಸದ್ಯದ ಹವಾಮಾನ ವ್ಯವಸ್ಥೆಯು ಆಂಧ್ರಪ್ರದೇಶದ ಕರಾವಳಿಯತ್ತ ಚಲಿಸುತ್ತಿರುವುದರಿಂದ ಉತ್ತರ ಭಾರತದಿಂದ ಬಲವಾದ ಮಾರುತಗಳು ಬೀಸುತ್ತಿವೆ. ಇದರ ಪರಿಣಾಮವಾಗಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಅದರಲ್ಲೂ ಸೆಪ್ಟೆಂಬರ್ 24 ರಂದು ಕರಾವಳಿಯ ಒಂದೆರಡು ಕಡೆಗಳಲ್ಲಿ ಅತ್ಯಂತ ಗರಿಷ್ಠ ಪ್ರಮಾಣದ ಮಳೆ ದಾಖಲಾಗುವ ಭೀತಿಯಿದೆ. ಇನ್ನು ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ ಹಾಗೂ ಗದಗ ಭಾಗಗಳಲ್ಲಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಲಿದ್ದು, ಜಿಟಿಜಿಟಿ ಮಳೆ ಮುಂದುವರಿಯಲಿದೆ.

ಮತ್ತೊಂದೆಡೆ, ರಾಜ್ಯ ರಾಜಧಾನಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ನಿನ್ನೆ ಸಂಜೆಯಿಂದಲೇ ವರುಣನ ಆರ್ಭಟ ಶುರುವಾಗಿದ್ದು, ಪ್ರಮುಖ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಬೆಂಗಳೂರಿನಲ್ಲಿ ಇಂದೂ ಸಹ ದಿನವಿಡೀ ಮೋಡಕವಿದ ವಾತಾವರಣ ಇರಲಿದ್ದು, ಸಂಜೆ ವೇಳೆಗೆ ಗುಡುಗು ಸಹಿತ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗಿನ ಕೆಲವು ಭಾಗಗಳಲ್ಲಿ ಸೀಮಿತ ಪ್ರಮಾಣದ ಮಳೆಯಾಗುವ ಸಾಧ್ಯತೆಗಳಿವೆ. ಬಂಗಾಳಕೊಲ್ಲಿಯ ಚಂಡಮಾರುತದ ಭೀತಿ ಸದ್ಯಕ್ಕೆ ದೂರವಾಗಿದ್ದರೂ, ಸಾರ್ವಜನಿಕರು ಮತ್ತು ವಿಶೇಷವಾಗಿ ಕರಾವಳಿಯ ಮೀನುಗಾರರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಇಲಾಖೆ ಸೂಚಿಸಿದೆ.