News Next Kannada

karnataka

ರಾಜ್ಯದಲ್ಲಿ ಕ್ಷೀಣಿಸಿದ ವರುಣನ ಆರ್ಭಟ, ಒಳನಾಡಿಗೆ ಬಿರುಗಾಳಿಯ ಮುನ್ನೆಚ್ಚರಿಕೆ

ಮಳೆಯ ಪ್ರಮಾಣ ತಗ್ಗಿದ್ದರೂ ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಬಿರುಗಾಳಿಯ ಹಾವಳಿ ಹೆಚ್ಚಾಗಲಿದೆ ಎಂದು ತಜ್ಞರು ಮುನ್ನೆಚ್ಚರಿಕೆ ನೀಡಿದ್ದಾರೆ.

By ರಶ್ಮಿ ಎಸ್. | Rashmi S
karnataka rain update monsoon slows down wind warning

ಕಳೆದ ಕೆಲವು ವಾರಗಳಿಂದ ರಾಜ್ಯದಾದ್ಯಂತ ಭಾರಿ ಆತಂಕ ಸೃಷ್ಟಿಸಿದ್ದ ಮುಂಗಾರು ಮಳೆಯ ಅಬ್ಬರ ಸದ್ಯಕ್ಕೆ ಸಂಪೂರ್ಣವಾಗಿ ತಣ್ಣಗಾಗಿದೆ. ಭಾರತೀಯ ಹವಾಮಾನ ಇಲಾಖೆಯ ತಾಜಾ ವರದಿಯ ಪ್ರಕಾರ, ಆಗಸ್ಟ್ 21ರ ರವರೆಗೆ ಕರ್ನಾಟಕದ ಯಾವುದೇ ಜಿಲ್ಲೆಗಳಿಗೂ ಭಾರಿ ಮಳೆಯ ಮುನ್ಸೂಚನೆ ಇಲ್ಲ. ಇದರಿಂದಾಗಿ ಪ್ರವಾಹ ಹಾಗೂ ಭೂಕುಸಿತದ ಭೀತಿಯಲ್ಲಿದ್ದ ಕರಾವಳಿ ಮತ್ತು ಮಲೆನಾಡಿನ ಜನತೆ ನಿಟ್ಟುಸಿರು ಬಿಡುವಂತಾಗಿದೆ. ಆದರೆ, ಮಳೆಯ ಪ್ರಮಾಣ ತಗ್ಗಿದ್ದರೂ ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಬಿರುಗಾಳಿಯ ಹಾವಳಿ ಹೆಚ್ಚಾಗಲಿದೆ ಎಂದು ತಜ್ಞರು ಮುನ್ನೆಚ್ಚರಿಕೆ ನೀಡಿದ್ದಾರೆ.

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಹವಾಮಾನ ಬದಲಾವಣೆಗಳಿಂದಾಗಿ ತೇವಾಂಶ ಭರಿತ ಮೋಡಗಳು ಪೆಸಿಫಿಕ್ ಮಹಾಸಾಗರದ ಕಡೆಗೆ ಮುಖ ಮಾಡಿವೆ. ಹೀಗಾಗಿ ರಾಜ್ಯಕ್ಕೆ ಮಳೆ ತರುವ ಮೋಡಗಳ ಪೂರೈಕೆ ಕಡಿತಗೊಂಡಿದ್ದು, ಒಣಹವೆ ಮುಂದುವರಿಯಲಿದೆ. ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡದಲ್ಲಿ ಮುಂದಿನ ಕೆಲವು ದಿನಗಳ ಕಾಲ ಬಿಸಿಲು ಮತ್ತು ಮೋಡ ಕವಿದ ಮಿಶ್ರ ವಾತಾವರಣ ಇರಲಿದ್ದು, ಒಂದೆರಡು ಕಡೆ ಮಾತ್ರ ಹಗುರ ತುಂತುರು ಮಳೆಯಾಗಬಹುದು. ಇತ್ತ ಮಲೆನಾಡಿನ ಶಿವಮೊಗ್ಗ, ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿಯೂ ವರಣನ ಅಬ್ಬರ ಕಡಿಮೆಯಾಗಲಿದೆ.

ಇನ್ನು ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ ಹಾಗೂ ಗದಗ ಜಿಲ್ಲೆಗಳಲ್ಲಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಪ್ರಬಲ ಗಾಳಿ ಬೀಸುವ ಸಾಧ್ಯತೆಯಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿಯೂ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದ ಗಾಳಿ ಇರಲಿದೆ. ಮಳೆಯ ಆತಂಕ ಇಲ್ಲದಿರುವುದರಿಂದ ರೈತರು ತಮ್ಮ ಕೃಷಿ ಚಟುವಟಿಕೆಗಳು ಹಾಗೂ ಔಷಧ ಸಿಂಪಡಣೆಯನ್ನು ಯಾವುದೇ ಅಡ್ಡಿಯಿಲ್ಲದೆ ಸುಲಭವಾಗಿ ನಿರ್ವಹಿಸಬಹುದಾಗಿದೆ. ಆಗಸ್ಟ್ 18 ಮತ್ತು 19ರ ನಂತರವಷ್ಟೇ ರಾಜ್ಯದ ಕೆಲವು ಭಾಗಗಳಲ್ಲಿ ಮತ್ತೆ ಸಾಧಾರಣ ಮಳೆ ಚುರುಕಾಗುವ ಲಕ್ಷಣಗಳಿವೆ.