ಬೆಂಗಳೂರು : ಹಬ್ಬಗಳ ಸಾಲಿನ ಆರಂಭದಲ್ಲೇ ರಾಜ್ಯದ ಜನತೆಗೆ ಮಳೆರಾಯ ಬಿಗ್ ಶಾಕ್ ನೀಡಿದ್ದಾನೆ. ಅಕ್ಟೋಬರ್ 1 ರ ಇಂದು ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಹವಾಮಾನ ಇಲಾಖೆಯು ಯೆಲ್ಲೋ ಅಲರ್ಟ್ ಘೋಷಿಸಿದೆ.
ದಕ್ಷಿಣ ಒಳನಾಡಿನಲ್ಲಿ ನೈಋತ್ಯ ಮುಂಗಾರು ತೀವ್ರಗೊಂಡಿದ್ದು, ಇಂದು ಧೋ ಎಂದು ಮಳೆ ಸುರಿಯಲಿದೆ. ಜಧಾರಾನಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ತುಮಕೂರು, ದಾವಣಗೆರೆ ಹಾಗೂ ಕೊಡಗು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ಈ ಭಾಗಗಳಲ್ಲಿ ಮಳೆಯ ಸಮಯದಲ್ಲಿ ಗಂಟೆಗೆ ಸುಮಾರು 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಜೋರಾದ ಗಾಳಿ ಬೀಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕರಾವಳಿ ಭಾಗದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಇಂದೂ ಸಹ ಗುಡುಗು-ಮಿಂಚಿನ ಅಬ್ಬರ ಜೋರಾಗಿರಲಿದ್ದು, ಉತ್ತರ ಕನ್ನಡದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ ಹಾಗೂ ಕೊಪ್ಪಳದಲ್ಲಿ ಸಾಧಾರಣ ಮಳೆಯ ಸಿಂಚನವಾಗಲಿದೆ. ಆದರೆ ವಿಜಯಪುರ, ಬಾಗಲಕೋಟೆ, ರಾಯಚೂರು, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮಾತ್ರ ಮಳೆರಾಯನ ದರ್ಶನವಿರದೆ ಒಣಹವೆ ಮುಂದುವರಿಯಲಿದೆ.
ಕಳೆದ 24 ಗಂಟೆಗಳಲ್ಲಿ ತುಮಕೂರು ಜಿಲ್ಲೆಯ ಕಿಬ್ಬನಹಳ್ಳಿಯಲ್ಲಿ 10 ಸೆಂಟಿಮೀಟರ್ ಹಾಗೂ ಸಿರಾ ಮತ್ತು ಚಿಕ್ಕನಹಳ್ಳಿಯಲ್ಲಿ ತಲಾ 9 ಸೆಂಟಿಮೀಟರ್ ಮಳೆ ದಾಖಲಾಗಿದೆ. ಬೆಂಗಳೂರಿನ ತಗ್ಗು ಪ್ರದೇಶಗಳಲ್ಲಿ ಮತ್ತು ರಸ್ತೆಗಳಲ್ಲಿ ಈಗಾಗಲೇ ನೀರು ನಿಂತು ಸಂಚಾರ ದಟ್ಟಣೆ ಉಂಟಾಗಿದ್ದು, ವಾಹನ ಸವಾರರು ಜಾಗ್ರತೆಯಿಂದ ಇರುವಂತೆ ಸೂಚಿಸಲಾಗಿದೆ.