Kannada News Next

karnataka

ಸೆಪ್ಟೆಂಬರ್ ಆರಂಭದಲ್ಲೇ ಬದಲಾದ ಹವಾಮಾನ: ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆ ಅಬ್ಬರ

ಘಟ್ಟ ಪ್ರದೇಶಗಳಲ್ಲಿ ತಂಪಾದ ಗಾಳಿ ಬೀಸಲಿದ್ದು, ಕೊಡಗಿನ ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 25 ಡಿಗ್ರಿ ಹಾಗೂ ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ದಾಖಲಾಗಬಹುದು.

By ರಶ್ಮಿ ಎಸ್. | Rashmi S
karnataka weather update heavy rain in coastal malnad

ಸೆಪ್ಟೆಂಬರ್ ತಿಂಗಳ ಮೊದಲ ದಿನವಾದ ಇಂದು ಕರ್ನಾಟಕದಾದ್ಯಂತ ಹವಾಮಾನದಲ್ಲಿ ಗಮನಾರ್ಹ ಬದಲಾವಣೆಗಳು ಕಂಡುಬರುತ್ತಿದ್ದು, ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ವರುಣನ ಅಬ್ಬರ ಮುಂದುವರಿಯುವ ಸಾಧ್ಯತೆಯಿದೆ. ಭಾರತೀಯ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯ ಪ್ರಕಾರ, ರಾಜ್ಯದ ಕರಾವಳಿ ಜಿಲ್ಲೆಗಳಾದ ಉಡುಪಿ ಹಾಗೂ ಉತ್ತರ ಕನ್ನಡದ ಹಲವು ಪ್ರದೇಶಗಳಲ್ಲಿ ಜೋರಾದ ಗಾಳಿಯೊಂದಿಗೆ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಇದರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ಸೇರಿದಂತೆ ಘಟ್ಟದ ಕೆಳಭಾಗದ ವಲಯಗಳಲ್ಲಿಯೂ ಮಳೆಯ ಪ್ರಮಾಣ ತುಸು ಹೆಚ್ಚಾಗಲಿದ್ದು, ಸೆಪ್ಟೆಂಬರ್ 3ರವರೆಗೂ ಇದೇ ರೀತಿಯ ತೇವಾಂಶಭರಿತ ವಾತಾವರಣ ಇರಲಿದೆ.

ಮತ್ತೊಂದೆಡೆ, ಕಾಫಿ ನಾಡು ಖ್ಯಾತಿಯ ಮಲೆನಾಡಿನ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಭಾಗಗಳಲ್ಲಿ ದಟ್ಟವಾದ ಮೋಡ ಕವಿದ ವಾತಾವರಣ ಇರಲಿದ್ದು, ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ಲಭಿಸಿದೆ. ಘಟ್ಟ ಪ್ರದೇಶಗಳಲ್ಲಿ ತಂಪಾದ ಗಾಳಿ ಬೀಸಲಿದ್ದು, ಕೊಡಗಿನ ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 25 ಡಿಗ್ರಿ ಹಾಗೂ ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ದಾಖಲಾಗಬಹುದು.

ಇನ್ನು ರಾಜಧಾನಿ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಇಂದು ದಿನವಿಡೀ ಮೋಡ ಕವಿದ ಸನ್ನಿವೇಶ ನಿರ್ಮಾಣವಾಗಲಿದೆ. ನಗರದ ಕೆಲವೆಡೆ ಸಂಜೆ ಅಥವಾ ರಾತ್ರಿಯ ಅವಧಿಯಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ.ಅಲ್ಲದೇ ಗಂಟೆಗೆ 40 ಕಿಲೋಮೀಟರ್​ ವೇಗದಲ್ಲಿ ಗಾಳಿ ಬೀಸಲಿದೆ. ಸಿಲಿಕಾನ್ ಸಿಟಿಯಲ್ಲಿ ಇಂದು ಗರಿಷ್ಠ ತಾಪಮಾನವು 29 ಡಿಗ್ರಿ ಸೆಲ್ಸಿಯಸ್ ತಲುಪಲಿದ್ದು, ಕನಿಷ್ಠ ತಾಪಮಾನವು 21 ಡಿಗ್ರಿ ಸೆಲ್ಸಿಯಸ್ ಕಾಯ್ದುಕೊಳ್ಳುವುದರಿಂದ ನಾಗರಿಕರು ತಂಪಾದ ದಿನವನ್ನು ಅನುಭವಿಸಲಿದ್ದಾರೆ. ಉತ್ತರ ಒಳನಾಡಿನ ಗದಗ ಮತ್ತು ಬಳ್ಳಾರಿಯಲ್ಲೂ ಹಗುರ ಮಳೆಯಾಗಲಿದೆ.