ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಮನ್ಮುಲ್) ಘಟಕ ಹಾಗೂ ಮದ್ದೂರಿನ ಗೆಜ್ಜಲಗೆರೆ ಗೋದಾಮಿನಲ್ಲಿ ಪತ್ತೆಯಾಗಿದ್ದ ಸುಮಾರು 57 ಟನ್ ಕೆನೆರಹಿತ ಹಾಲಿನ ಪುಡಿಯು ಮಾನವ ಬಳಕೆಗೆ ತೀರಾ ಹಾನಿಕಾರಕ ಎಂದು ಪ್ರಯೋಗಾಲಯದ ವರದಿಯು ಇತ್ತೀಚೆಗೆ ದೃಢಪಡಿಸಿದೆ. ಸಾರ್ವಜನಿಕ ಆಹಾರ ಪೂರೈಕೆ ವ್ಯವಸ್ಥೆ ಮತ್ತು ಸೇನೆಗೂ ಸರಬರಾಜಾಗುವ ಈ ಹಾಲಿನ ಪುಡಿಯಲ್ಲಿ ಇಂತಹ ಗಂಭೀರ ಕಲಬೆರಕೆ ಪತ್ತೆಯಾಗಿರುವುದು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ.
ಜೂನ್ ತಿಂಗಳಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ಮಂಡ್ಯದ ಈ ದಾಸ್ತಾನು ಕೇಂದ್ರಗಳ ಮೇಲೆ ದಿಢೀರ್ ದಾಳಿ ನಡೆಸಿ, ಮಾದರಿಗಳನ್ನು ಮೈಸೂರಿನ ವಿಭಾಗೀಯ ಪ್ರಯೋಗಾಲಯಕ್ಕೆ ರವಾನಿಸಿದ್ದರು. ಆಹಾರ ಸುರಕ್ಷತಾ ಕಾಯ್ದೆಯನ್ವಯ ಹಾಲಿನ ಪುಡಿಯಲ್ಲಿ ಕನಿಷ್ಠ ಶೇ. 34 ರಷ್ಟು ಇರಬೇಕಾಗಿದ್ದ ಪ್ರೊಟೀನ್ ಅಂಶವು ಇದರಲ್ಲಿ ಕೇವಲ ಶೇ. 10.65 ರಷ್ಟು ಮಾತ್ರ ಇರುವುದು ಪತ್ತೆಯಾಗಿದೆ. ಲಾಭದ ಆಸೆಗೆ ಬಿದ್ದ ಜಾಲವು ಹಾಲಿನ ಪುಡಿಯ ತೂಕ ಹೆಚ್ಚಿಸಲು ಅದರಲ್ಲಿ ಸ್ಟಾರ್ಚ್, ಮಾಲ್ಟೊಡೆಕ್ಸ್ಟ್ರಿನ್ ರಾಸಾಯನಿಕ ಮತ್ತು ಆಲೂಗೆಡ್ಡೆಯಂತಹ ಅಗ್ಗದ ಸಸ್ಯಜನ್ಯ ಪುಡಿಗಳನ್ನು ಯದ್ವಾತದ್ವಾ ಮಿಶ್ರಣ ಮಾಡಿ ಸಾರ್ವಜನಿಕರ ಆರೋಗ್ಯದ ಜೊತೆ ಆಟವಾಡಿರುವುದು ಬೆಳಕಿಗೆ ಬಂದಿದೆ.
ಪ್ರಕರಣದ ಬೆನ್ನಲ್ಲೇ ಆಡಳಿತ ಮಂಡಳಿ ಮತ್ತು ಗೋದಾಮು ಮಾಲೀಕರ ನಡುವೆ ಕೆಸರೆರಚಾಟ ಆರಂಭವಾಗಿದೆ. ಮನ್ಮುಲ್ ಅಧ್ಯಕ್ಷ ಎಂ.ಕೆ. ಹರೀಶ್‌ಬಾಬು ಅವರು ಒಕ್ಕೂಟದ ತಪ್ಪೇನಿಲ್ಲ ಎಂದು ಸಮರ್ಥಿಸಿಕೊಂಡಿದ್ದು, ಸಂಸ್ಥೆಗೆ ಕಳಂಕ ತರಲು ಗೋದಾಮಿನ ಮಾಲೀಕರೇ ಈ ಕೃತ್ಯ ಎಸಗಿದ್ದಾರೆಂದು ಮದ್ದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಲ್ಲದೆ ಕೋಟ್ಯಂತರ ರೂಪಾಯಿ ಮೌಲ್ಯದ ಹಾಲಿನ ಪುಡಿ ನಾಪತ್ತೆಯಾಗಿದ್ದು, ಗೋದಾಮು ಮಾಲೀಕರು ನೀಡಿದ ಚೆಕ್‌ಗಳು ಕೂಡ ಬೌನ್ಸ್ ಆಗಿವೆ ಎಂದಿದ್ದಾರೆ.
ಆದರೆ ಸರ್ಕಾರದ ಆಹಾರ ಸುರಕ್ಷತಾ ಇಲಾಖೆಯು ಮನ್ಮುಲ್ ಒಕ್ಕೂಟವನ್ನೇ ಈ ಕಲಬೆರಕೆಗೆ ಹೊಣೆಗಾರರನ್ನಾಗಿ ಮಾಡಿದೆ. ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಮನ್ಮುಲ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಬೆಂಗಳೂರಿನ ಆಹಾರ ಸುರಕ್ಷತಾ ಉಪ ಆಯುಕ್ತರು ಸ್ಥಳೀಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಈ ಹಾಲಿನ ಪುಡಿ ಹಗರಣದ ಸೂತ್ರಧಾರಿಗಳು ಯಾರೇ ಆಗಿದ್ದರೂ ಕಠಿಣ ಶಿಕ್ಷೆಯಾಗಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.