ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ನೈಋುತ್ಯ ರೈಲ್ವೆ ಬೆಂಗಳೂರಿನಿಂದ ಕಾರಾವಾರ ಮೂಲಕ ಮಡಗಾಂವ್‌ವರೆಗೆ ರೈಲು ಸಂಚಾರ ನಡೆಸಲಿದೆ. ಆದರೆ ಮಂಗಳೂರಿಗೆ ಯಾವುದೇ ವಿಶೇಷ ರೈಲನ್ನು ನೀಡದೇ ಇರುವುದು ದಕ್ಷಿಣ ಕನ್ನಡದ ರೈಲು ಬಳಕೆದಾರರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರಿನ ಯಶವಂತಪುರ - ಮಡಗಾಂವ್ ನಡುವೆ ವಿಶೇಷ ರೈಲು ಶುಕ್ರವಾರ ರಾತ್ರಿ ಹೊರಟು ಶನಿವಾರ ಮಡಗಾಂ ತಲುಪಲಿದೆ. ಸೋಮವಾರ ಮಡಗಾಂನಿಂದ ಹೊರಟು ಮಂಗಳವಾರ ನಸುಕಿನ ವೇಳೆ ಬೆಂಗಳೂರು ತಲುಪಲಿದೆ. ಈ ವೀಶೇಷ ರೈಲು ಮಂಗಳೂರು ಪ್ರವೇಶಿಸದೆ ಪಡೀಲ್ ಬೈಪಾಸ್ ಮೂಲಕ ಸಾಗಲಿದ್ದು, ಇದರಿಂದ ಬೆಂಗಳೂರಿನಿಂದ ಮಂಗಳೂರಿಗೆ ಬರುವ ಪ್ರಯಾಣಿಕರಿಗೆ ಯಾವುದೇ ರೀತಿಯಲ್ಲಿ ಪ್ರಯೋಜನವಾಗುತ್ತಿಲ್ಲ.
ಗಣೇಶ ಹಬ್ಬದ ವೇಳೆಯಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ವಿಶೇಷ ರೈಲು ಓಡಿಸುವಂತೆ ಈ ಹಿಂದೆಯೇ ದಕ್ಷಿಣ ಕನ್ನಡ ಸಂಸದಸ ಬ್ರಿಜೆಶ್ ಚೌಟ, ರೈಲ್ವೆ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಆದರೆ ರೈಲ್ವೆ ಇಲಾಖೆಯು ಸಂಸದರ ಮನವಿಯನ್ನೂ ಪುರಸ್ಕರಿಸಿಲ್ಲ. ಮಂಗಳೂರಿಗೆ ಬೆಂಗಳೂರಿನಿಂದ ಬರುವ ರೈಲು ಮಂಗಳೂರಿನ ಪಡೀಲ್ ಬೈಪಾಸ್ ಮೂಲಕ ಉಡುಪಿ ಮಾರ್ಗವಾಗಿ ಕಾರವಾರಕ್ಕೆ ಸಂಚಾರ ನಡೆಸುತ್ತಿದೆ. ಆದರೆ ಮಂಗಳೂರಿಗೆ ವಿಶೇಷ ರೈಲು ಓಡಿಸಬೇಕು ಅನ್ನೋದು ಕರಾವಳಿಗರ ಆಗ್ರಹ.
ವರ್ಷಂಪ್ರತಿ ಗಣೇಶ ಚತುರ್ಥಿ, ಓಣಂ, ನವರಾತ್ರಿ, ದೀಪಾವಳಿ ಸೇರಿದಂತೆ ವಿಶೇಷ ಹಬ್ಬಗಳ ಸಂದರ್ಭದಲ್ಲಿ ಬೆಂಗಳೂರು - ಮಂಗಳೂರು ನಡುವೆ ವಿಶೇಷ ರೈಲು ಓಡಿಸಬೇಕು. ಪ್ರತೀ ವರ್ಷ ಹಬ್ಬದ ಸಂದರ್ಭದಲ್ಲಿ ಉದ್ಯೋಗಿಗಳಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಸೆಪ್ಟೆಂಬರ್ 11 ರಂದು ಬೆಂಗಳೂರಿನಿಂದ ಕರಾವಾರಕ್ಕೆ ವಿಶೇಷ ರೈಲು ಓಡಿಸುವಂತೆ ಮಂಗಳೂರಿಗೂ ವಿಶೇಷ ರೈಲು ಓಡಿಸಿದ್ದರೆ ಮೂರು ದಿನಗಳ ರಜೆಯ ನಿಮಿತ್ತ ಮಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ. ರೈಲ್ವೆ ಇಲಾಖೆ ಮಂಗಳೂರಿನಿಂದಲೇ 600 ಕೋಟಿಗೂ ಅಧಿಕ ಆದಾಯ ದೊರೆಯುತ್ತಿದ್ದರೂ ಕೂಡ ಮಂಗಳೂರಿಗರ ಬೇಡಿಕೆ ಈಡೇರಿಸೋದಕ್ಕೆ ಹಿಂದೇಟು ಹಾಕ್ತಾ ಇರೋದು ಮಾತ್ರ ದುರಂತ.