ಬೆಂಗಳೂರು : ಇತ್ತೀಚೆಗಷ್ಟೇ ಸಕ್ಕರೆ ಬೆಲೆ ಏರಿಕೆಯಾಗಿ ಜನಸಾಮಾನ್ಯರು ಕಂಗಾಲಾಗಿದ್ದರು. ಆದರೆ ಈಗ ಆ ಕಹಿಯ ಬೆನ್ನಲ್ಲೇ ನಿತ್ಯದ ಅಡುಗೆಯ ಅವಿಭಾಜ್ಯ ಅಂಗವಾಗಿರುವ ಈರುಳ್ಳಿ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿರುವುದು ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಶ್ರಾವಣದ ಹಬ್ಬಗಳ ಸಾಲು ಆರಂಭವಾಗುತ್ತಿದ್ದಂತೆ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಸಾರ್ವಜನಿಕರ ಕೈಗೆಟುಕದ ಮಟ್ಟಕ್ಕೆ ತಲುಪುತ್ತಿದೆ. ರಾಜ್ಯದಲ್ಲಿ ಮುಂಗಾರು ಮಳೆಯ ತೀವ್ರ ಕೊರತೆಯಿಂದಾಗಿ ಬರಗಾಲ ಆವರಿಸಿದ್ದು, ಈ ಬಾರಿ ಶೇಕಡಾ 7೦ ರಷ್ಟು ಈರುಳ್ಳಿ ಇಳುವರಿ ಕುಸಿದಿದೆ.
ಮಾರುಕಟ್ಟೆಗೆ ಆಮದು ಪ್ರಕ್ರಿಯೆ ಸಂಪೂರ್ಣ ಸ್ಥಗಿತಗೊಂಡಿದ್ದು, ಕೇವಲ ಕರ್ನಾಟಕ ಮತ್ತು ಮಹಾರಾಷ್ಟ್ರದ ದಾಸ್ತಾನುಗಳು ಮಾತ್ರ ಲಭ್ಯವಿವೆ. ಹೀಗಿದ್ದೂ ಸ್ಥಳೀಯ ಮಾರುಕಟ್ಟೆಯ ಕೊರತೆಯ ನಡುವೆಯೂ ಹೊರ ರಾಜ್ಯ ಹಾಗೂ ವಿದೇಶಗಳಿಗೆ ಈರುಳ್ಳಿ ನಿರಂತರವಾಗಿ ರಫ್ತಾಗುತ್ತಿರುವುದು ಬೆಲೆ ಗಗನಕ್ಕೇರಲು ಮುಖ್ಯ ಕಾರಣವಾಗಿದೆ.
ಪ್ರಸ್ತುತ ಹಾಪ್ಕಾಮ್ಸ್ ಮಳಿಗೆಗಳಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ ಬೆಲೆ ಕೆಜಿಗೆ ₹7೦ ರಿಂದ ₹75 ಮುಟ್ಟಿದೆ. ಎಪಿಎಂಸಿ ಸಗಟು ಮಾರುಕಟ್ಟೆಯಲ್ಲೇ ದರ ₹5೦ ರಿಂದ ₹6೦ ಇದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಗ್ರಾಹಕರು ಕಣ್ಣೀರು ಹಾಕುವಂತಾಗಿದೆ.
ಮಾರುಕಟ್ಟೆ ತಜ್ಞರ ಪ್ರಕಾರ ಮುಂದಿನ ಒಂದೂವರೆ ತಿಂಗಳು ಇದೇ ಪರಿಸ್ಥಿತಿ ಮುಂದುವರಿಯಲಿದ್ದು, ಶೀಘ್ರದಲ್ಲೇ ಈರುಳ್ಳಿ ದರ ₹100ರ ಗಡಿ ದಾಟುವ ಮುನ್ಸೂಚನೆ ಸಿಕ್ಕಿದೆ. ಈಗಾಗಲೇ ದುಬಾರಿಯಾಗಿರುವ ಸಕ್ಕರೆಯಿಂದಾಗಿ ಹಬ್ಬದ ಸಿಹಿ ಪದಾರ್ಥಗಳ ತಯಾರಿಕೆಗೆ ಜನಸಾಮಾನ್ಯರು ಯೋಚಿಸುವಂತಾಗಿತ್ತು.
ಈಗ ನಿತ್ಯದ ಸಾರು-ಪಲ್ಯಗಳಿಗೆ ಬೇಕಾಗುವ ಈರುಳ್ಳಿ ದರವೂ ಕೈ ಸುಡುತ್ತಿರುವುದರಿಂದ ಮಧ್ಯಮ ವರ್ಗದವರ ಬಜೆಟ್ ಸಂಪೂರ್ಣ ತಲೆಕೆಳಗಾಗಿದೆ. 'ಎಷ್ಟೇ ಬೆಲೆಯಾದರೂ ಅನಿವಾರ್ಯವಾಗಿ ಖರೀದಿಸಲೇಬೇಕಿದೆ' ಎಂದು ಗ್ರಾಹಕರು ಅಳಲು ತೋಡಿಕೊಳ್ಳುತ್ತಿದ್ದು, ಸರ್ಕಾರ ತಕ್ಷಣ ಆಹಾರ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಮೂಲಕ ರಿಯಾಯಿತಿ ದರದಲ್ಲಿ ಈರುಳ್ಳಿ ಒದಗಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.