News Next Kannada

karnataka

ರಾಜ್ಯದಲ್ಲಿ ಕೃತಕ ಚೀಸ್, ಪನ್ನೀರ್, ಬೆಣ್ಣೆ ಮಾರಾಟಕ್ಕೆ ಬ್ರೇಕ್: ಯು.ಟಿ. ಖಾದರ್ ಎಚ್ಚರಿಕೆ

ರಾಜ್ಯದಲ್ಲಿ ಸಾರ್ವಜನಿಕರ ಆರೋಗ್ಯದ ರಕ್ಷಣೆಗೆ ಪ್ರಥಮ ಆದ್ಯತೆ ನೀಡಿರುವ ಸರ್ಕಾರ, ಕೃತಕ ಹಾಗೂ ನಕಲಿ ಆಹಾರ ಪದಾರ್ಥಗಳ ತಯಾರಿಕೆ ಮತ್ತು ಮಾರಾಟದ ವಿರುದ್ಧ ಸಮರ ಸಾರಿದೆ.

By Meghana Pranuth | ಮೇಘನಾ ಪ್ರಣೂತ್‌
UT KHADAR WARNING

ರಾಜ್ಯದಲ್ಲಿ ಸಾರ್ವಜನಿಕರ ಆರೋಗ್ಯದ ರಕ್ಷಣೆಗೆ ಪ್ರಥಮ ಆದ್ಯತೆ ನೀಡಿರುವ ಸರ್ಕಾರ, ಕೃತಕ ಹಾಗೂ ನಕಲಿ ಆಹಾರ ಪದಾರ್ಥಗಳ ತಯಾರಿಕೆ ಮತ್ತು ಮಾರಾಟದ ವಿರುದ್ಧ ಸಮರ ಸಾರಿದೆ. ಚೀಸ್, ಪನ್ನೀರ್ ಹಾಗೂ ಬೆಣ್ಣೆ ಸೇರಿದಂತೆ ಯಾವುದೇ ರೀತಿಯ ಕೃತಕ ಆಹಾರ ಉತ್ಪನ್ನಗಳನ್ನು ಬಳಸುವಂತಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೃತಕ ಆಹಾರ ಪದಾರ್ಥಗಳ ಉತ್ಪಾದನೆಗೆ ನಮ್ಮ ಕಾನೂನಿನಲ್ಲಿ ಈಗಾಗಲೇ ನಿಷೇಧವಿದೆ ಎಂದರು. ಸಾರ್ವಜನಿಕರ ಜೀವದ ಜೊತೆ ಆಟವಾಡುವ ಯಾವುದೇ ಕಂಪನಿಗಳು ಕಾನೂನು ಉಲ್ಲಂಘಿಸಿದರೆ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಹೋಟೆಲ್‌ಗಳು ಸ್ಟಾರ್ ದರ್ಜೆಯದ್ದಾಗಿರಲಿ ಅಥವಾ ಸಾಮಾನ್ಯ ಕ್ಯಾಂಟೀನ್‌ ಆಗಿರಲಿ, ಗ್ರಾಹಕರಿಗೆ ಕೇವಲ ಗುಣಮಟ್ಟದ ಹಾಗೂ ಶುದ್ಧವಾದ ಆಹಾರವನ್ನೇ ಉಣಬಡಿಸಬೇಕು. ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಇಲಾಖೆಯು ಶೀಘ್ರದಲ್ಲೇ ಮತ್ತೊಂದು ವಿಶೇಷ ಆದೇಶವನ್ನು ಹೊರಡಿಸಲಿದೆ ಎಂದು ಅವರು ಸ್ಪಷ್ಟಪಡಿಸಿದರು.

ಮತ್ತೊಂದೆಡೆ, ನಗರದ ಉತ್ತರ ಪಾಲಿಕೆ ವ್ಯಾಪ್ತಿಯಲ್ಲಿ ನಿಯಮಗಳನ್ನು ಗಾಳಿಗೆ ತೂರಿದ್ದ ಪ್ರಮುಖ ಹೋಟೆಲ್‌ಗಳ ಮೇಲೆ ವೈದ್ಯಾಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿದೆ. ಬ್ಯಾಟರಾಯನಪುರ ಹಾಗೂ ಯಲಹಂಕ ವಿಭಾಗದ ಅಧಿಕಾರಿಗಳು ನಡೆಸಿದ ಈ ಜಂಟಿ ಕಾರ್ಯಾಚರಣೆಯಲ್ಲಿ, ಅಶುಚಿತ್ವ ಹಾಗೂ ಕಸ ವಿಂಗಡಣೆ ಮಾಡದ ಹೋಟೆಲ್‌ಗಳಿಗೆ ಒಟ್ಟು 1.60 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

ತ್ಯಾಜ್ಯ ವಿಂಗಡಿಸದೆ ನೊಣಗಳು ಕಂಡುಬಂದ ಹಿನ್ನೆಲೆಯಲ್ಲಿ ಪ್ರಸಿದ್ಧ ಹಯಾತ್ ಸೆಂಟ್ರಿಕ್ ಹೋಟೆಲ್‌ಗೆ ನೋಟಿಸ್ ನೀಡಿ 40 ಸಾವಿರ ರೂಪಾಯಿ ದಂಡ ಹಾಕಲಾಗಿದೆ. ಉಳಿದಂತೆ ಪೀಪಾಯ್ ಬ್ರೇವರಿ ಅಂಡ್ ಕಿಚನ್'ಗೆ 80 ಸಾವಿರ ರೂ., ತಲಸೇರಿ ರೆಸ್ಟೋರೆಂಟ್‌ ಗೆ 20 ಸಾವಿರ ರೂ., ನಂದನ ಪ್ಯಾಲೇಸ್ ಗೆ 15 ಸಾವಿರ ರೂ. ಹಾಗೂ ಚಿಕ್ ಪೇಟ್ ದೊನ್ನೆ ಬಿರಿಯಾನಿ ಮಳಿಗೆಗೆ 5 ಸಾವಿರ ರೂ. ದಂಡ ವಿಧಿಸಲಾಗಿದೆ. ಅನೈರ್ಮಲ್ಯದ ವಾತಾವರಣ ಹೊಂದಿದ್ದ ಸ್ವಾತಿ ಹೋಟೆಲ್ ಗೆ ಪಾಲಿಕೆ ಆಯುಕ್ತರು ನೋಟಿಸ್ ಜಾರಿ ಮಾಡಿದ್ದಾರೆ. ಆಹಾರ ಸುರಕ್ಷತೆಯ ಹಿತದೃಷ್ಟಿಯಿಂದ ರಾಜ್ಯಾದ್ಯಂತ ಈ ತಪಾಸಣೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.