Kannada News Next

karnataka

ತುಳುವಿಗೆ ಸಿಕ್ತು ಎರಡನೇ ರಾಜ್ಯ ಭಾಷೆ ಸ್ಥಾನಮಾನ : ಕಾಫಿನಾಡಲ್ಲೀಗ ಕೊಡವ ಭಾಷೆಗೆ ಮಾನ್ಯತೆಯ ಕೂಗು

ಕೊಡಗಿನಲ್ಲಿ ಕೊಡವ ಭಾಷೆಗೆ ಮಾನ್ಯತೆ ನೀಡಬೇಕೆಂಬ ಕೂಗು ಕೇಳಿಬರುತ್ತಿದ್ದು, ಮೈಸೂರು ಸಂಸದ ಯದುವೀರ್‌ ಕೂಡ ಕೊಡವ ಭಾಷೆ ಹೋರಾಟಕ್ಕೆ ಧ್ವನಿಗೂಡಿಸಿದ್ದಾರೆ.

By Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ
tulu second official language karnataka kodava demand

ಸಿಎಂ ಡಿಕೆ ಶಿವಕುಮಾರ್‌ ನೇತೃತ್ವದಲ್ಲಿ ಮಂಗಳೂರಲ್ಲಿ ಕ್ಯಾಬಿನೆಟ್‌ ಮೀಟಿಂಗ್‌ ನಡೆದ ಬೆನ್ನಲ್ಲೇ ತುಳು ಭಾಷೆಗೆ ರಾಜ್ಯದ ಎರಡನೇ ಭಾಷೆ ಮಾನ್ಯತೆ ನೀಡಲಾಗಿತ್ತು. ಇದರ ಬೆನ್ನಲ್ಲೇ ಕೊಡಗಿನಲ್ಲಿ ಕೊಡವ ಭಾಷೆಗೆ ಮಾನ್ಯತೆ ನೀಡಬೇಕೆಂಬ ಕೂಗು ಕೇಳಿಬರುತ್ತಿದ್ದು, ಮೈಸೂರು ಸಂಸದ ಯದುವೀರ್‌ ಕೂಡ ಕೊಡವ ಭಾಷೆ ಹೋರಾಟಕ್ಕೆ ಧ್ವನಿಗೂಡಿಸಿದ್ದಾರೆ.

ತುಳು ಭಾಷೆಗೆ ಅಧಿಕೃತ ಸ್ಥಾನಮಾನ ನೀಡಬೇಕು ಅನ್ನೋ ಹೋರಾಟ ಹಲವು ವರ್ಷಗಳಿಂದಲೂ ಕೇಳಿಬರುತ್ತಲೇ ಇತ್ತು. ಕೊನೆಗೂ ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟದಲ್ಲಿ ತುಳು ಭಾಷೆಯನ್ನು ಕರ್ನಾಟಕದ ಎರಡನೇ ಹೆಚ್ಚುವರಿ ಭಾಷೆಯಾಗಿ ಘೋಷಿಸುವ ಪ್ರಸ್ತಾವನೆಯನ್ನು ರಾಜ್ಯ ಸಚಿವ ಸಂಪುಟ ಅನಮೋದನೆ ನೀಡಿತ್ತು. ತುಳುನಾಡಿನ ಜನತೆಯ ಬಹು ವರ್ಷದ ಬೇಡಿಕೆ ಕೊನೆಗೂ ನನಸಾಗಿತ್ತು.

ತುಳು ಭಾಷೆಯನ್ನು ಕರ್ನಾಟಕ ರಾಜ್ಯದ ಎರಡನೇ ಹೆಚ್ಚುವರಿ ಭಾಷೆಯಾಗಿ ಘೋಷಣೆ ನೀಡಿದ ಬೆನ್ನಲ್ಲೇ ಕಾಫಿನಾಡು ಕೊಡಗಿನಲ್ಲಿ ಕೊಡವ ಭಾಷೆಗೂ ತುಳು ಭಾಷೆಗೆ ನೀಡಿದಂತೆಯೇ ಪ್ರಾತಿನಿಧ್ಯ ನೀಡಬೇಕು ಅನ್ನೋ ಆಗ್ರಹ ಕೇಳಿಬಂದಿದೆ. ಕೇವಲ ಕೊಡವ ಜನರಷ್ಟೇ ಅಲ್ಲದೇ ಸಂಸದ ಯದುವೀರ್ ಕೃಷ್ಟದತ್ತ ಚಾಮರಾಜ ಒಡೆಯರ್ ಕೂಡ ಆಗ್ರಹಿಸಿದ್ದಾರೆ.

ಇನ್ನು ತುಳು ಭಾಷೆಗೆ ಅಧಿಕೃತ ಸ್ಥಾನಮಾನ ನೀಡಿದ ಕುರಿತು ಪ್ರತಿಕ್ರಿಯಿಸಿರುವ ಯದುವೀರ್‌ ಅವರು, ಕರಾವಳಿ ಬಿಜೆಪಿಯ ಭದ್ರಕೋಟೆ, ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು ಕೇವಲ ಯೋಜನೆಗಳನ್ನು ಘೋಷಣೆ ಮಾಡಿದರೆ ಮಾತ್ರವೇ ಸಾಲದು, ಅವುಗಳನ್ನು ಅನುಷ್ಠಾನ ಮಾಡಬೇಕು. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಕೂಡ ಹಲವು ಯೋಜನೆಗಳನ್ನು ಘೋಷಣೆ ಮಾಡಿದ್ದರು ಆದರೆ ಯಾವ ಯೋಜನೆಗಳು ಕೂಡ ಅನುಷ್ಠಾನಕ್ಕೆ ಬರಲೇ ಇಲ್ಲ ಎಂದಿದ್ದಾರೆ.