ಬಯಲು ಸೀಮೆಯ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಸೇರಿದಂತೆ ಆರು ಜಿಲ್ಲೆಗಳ ಕುಡಿಯುವ ನೀರು ಒದಗಿಸುವ ಎತ್ತಿನಹೊಳೆ ಯೋಜನೆ ಕೊನೆಗೂ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಕರ್ನಾಟಕದ ಮಹತ್ವದ ಎತ್ತಿನಹೊಳೆ ಯೋಜನೆ ಇದೀಗ ಅಂತಿಮ ಹಂತವನ್ನು ತಲುಪಿದ್ದು, ಅಕ್ಟೋಬರ್‌ನಲ್ಲಿ ಪರೀಕ್ಷಾರ್ಥವಾಗಿ ನೀರು ಹರಿಸಲು ಸಿದ್ದತೆ ನಡೆಸಿದ್ದು, ಅಕ್ಟೋಬರ್ ತಿಂಗಳಿನಲ್ಲಿ ಎತ್ತಿನಹೊಳೆ ಯೋಜನೆಯ ಟ್ರಯಲ್ ರನ್ ನಡೆಯಲಿದೆ.
ಬಯಲು ಸೀಮೆಯ ಜನರ ಕುರಿತು ನೀರಿನ ದಾಹ ನೀಗಿಸುವ ಸಲುವಾಗಿಯೇ ಎತ್ತಿನಹೊಳೆ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಅಡಿಯಲ್ಲಿ ಅಕ್ಟೋಬರ್ ತಿಂಗಳ ಅಂತ್ಯಕ್ಕೆ ಯೋಜನೆಯ ಪ್ರಮುಖ ನಾಲೆಗಳಲ್ಲಿ ನೀರು ಹರಿಸಿ ಪರೀಕ್ಷಾರ್ಥ ಸಂಚಾರ (Trial Run) ನಡೆಸಲು ಜಲಸಂಪನ್ಮೂಲ ಇಲಾಖೆ ಮುಂದಾಗಿದೆ. ಇದಕ್ಕಾಗಿ ಅಧಿಕಾರಿಗಳು ಹಾಗೂ ಎಂಜಿನಿಯರ್‌ಗಳು ಸಿದ್ಧತೆ ನಡೆಸಿದ್ದಾರೆ. ಈ ಮೂಲಕ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಮುಂತಾದ ಜಿಲ್ಲೆಗಳಲ್ಲಿ ನೀರಿನ ಹೊಳೆ ಹರಿಯಲಿದೆ.
ಮಲೆನಾಡಿನ ಹಾಸನ ಜಿಲ್ಲೆಯ ಸಕಲೇಶಪುರದಿಂದ ಆರಂಭಗೊಂಡಿರುವ ಎತ್ತಿನಹೊಳೆ ಯೋಜನೆ ತುಮಕೂರು ಗಡಿಯ ವರೆಗೆ ಸುಮಾರು 250 ಕಿಲೋ ಮೀಟರ್ ದೂರದ ಮುಖ್ಯ ನಾಲೆಯ ಕಾಮಗಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಕೇವಲ ಒಂದು ತಿಂಗಳ ಅವಧಿಯಲ್ಲಿ ನಾಲೆಯಲ್ಲಿ ಹಂತ ಹಂತವಾಗಿ ನೀರನ್ನು ಹರಿಸುವ ಮೂಲಕ ಪೈಪ್‌ಲೈನ್ ಪರೀಕ್ಷೆ ನಡೆಸಲಾಗುತ್ತದೆ. 2014ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡಿದ್ದರು. ಇದೀಗ 11 ವರ್ಷಗಳ ಬಳಿಕ ಯೋಜನೆಯ ಮಹತ್ವದ ಮೈಲಿಗಲ್ಲು ಸಾಧಿಸಿದೆ.
ಮಲೆನಾಡಿನ ಹಾಸನ, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳ ಲಕ್ಷಾಂತರ ರೈತರಿಗೆ ಕುಡಿಯುವ ನೀರಿನ ದಾಹಕ್ಕೆ ಆಸರೆಯಾಗಲಿದೆ. ಅಕ್ಟೋಬರ್ ತಿಂಗಳಲ್ಲಿ ಟ್ರಯಲ್ ರನ್ ನಡೆಯಲಿದ್ದು, ವರ್ಷಾಂತ್ಯಕ್ಕೆ ಎತ್ತಿನಹೊಳೆ ಯೋಜನೆಯ ನೀರು ಬಯಲು ಸೀಮೆಯ ಭಾಗಕ್ಕೆ ಹರಿಯುವುದು ಪಕ್ಕಾ. ಯೋಜನೆಯ ಕಾಮಗಾರಿ ಈಗಾಗಲೇ ಬಹುತೇಕ ಪೂರ್ಣಗೊಂಡಿದ್ದು, ಟ್ರಯಲ್ ರನ್ ಯಶಸ್ವಿ ಆಗೋದು ಬಹುತೇಕ ಪಕ್ಕಾ ಎನ್ನಲಾಗುತ್ತಿದೆ.