ಮಂಗಳೂರು ನಗರದ ಕೆ.ಎಸ್. ರಾವ್ ರಸ್ತೆಯ ಸಿಟಿ ಸೆಂಟರ್ ಮಾಲ್‌ನಲ್ಲಿರುವ ಪ್ರಸಿದ್ಧ ಕೆಎಫ್‌ಸಿ ಔಟ್‌ಲೆಟ್ ಮೇಲೆ ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಗ್ರಾಹಕರೊಬ್ಬರು ಆನ್‌ಲೈನ್ ಮೂಲಕ ತರಿಸಿದ್ದ ಆಹಾರದಲ್ಲಿ ತೀವ್ರ ಲೋಪದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಸದ್ಯ ಅಧಿಕಾರಿಗಳು ಸುರಕ್ಷತೆಯ ದೃಷ್ಟಿಯಿಂದ ಈ ಇಡೀ ಮಳಿಗೆಯನ್ನು ಸೀಲ್ ಮಾಡಿ ಬೀಗ ಹಾಕಲಾಗಿದೆ.
ಮಾಜಿ ಮೇಯರ್ ಕವಿತಾ ಸನಿಲ್ ಅವರು ಆನ್‌ಲೈನ್ ಆಪ್ ಮೂಲಕ ಆರ್ಡರ್ ಮಾಡಿದ್ದ 'ಪೆರಿ ಪೆರಿ ಚಿಕನ್' ತೀವ್ರ ದುರ್ವಾಸನೆ ಬೀರುತ್ತಿತ್ತು ಹಾಗೂ ಮಾಂಸವು ಕಪ್ಪಾಗಿತ್ತು. ಈ ಬಗ್ಗೆ ಅವರು ನೀಡಿದ ತುರ್ತು ದೂರಿನ ಮೇರೆಗೆ ಜಿಲ್ಲಾ ಆಹಾರ ಸುರಕ್ಷತಾ ಅಂಕಿತಾಧಿಕಾರಿ ಡಾ. ಪ್ರವೀಣ್ ಕುಮಾರ್ ಅವರ ನೇತೃತ್ವದ ತಂಡವು ಮಳಿಗೆಗೆ ಭೇಟಿ ನೀಡಿ ಕೂಲಂಕಷ ಪರಿಶೀಲನೆ ನಡೆಸಿತು.
ತಪಾಸಣೆಯ ವೇಳೆ ಮಳಿಗೆಯ ಅಡುಗೆ ಕೋಣೆ ಮತ್ತು ಕೋಲ್ಡ್ ಸ್ಟೋರೇಜ್‌ಗಳಲ್ಲಿ ಅಶುಚಿತ್ವ ಎದ್ದು ಕಾಣುತ್ತಿತ್ತು. ಅಲ್ಲಿ ಸುಮಾರು 4 ರಿಂದ 5 ತಿಂಗಳ ಹಿಂದೆ ಪ್ಯಾಕ್ ಮಾಡಲಾಗಿದ್ದ ಹಳೆಯ ಚಿಕನ್ ದಾಸ್ತಾನು ಪತ್ತೆಯಾಗಿದೆ. ಅಷ್ಟೇ ಅಲ್ಲದೆ, ಚಿಕನ್ ಕರಿಯಲು ಬಳಸುತ್ತಿದ್ದ ಎಣ್ಣೆಯು ಸಂಪೂರ್ಣ ಕಪ್ಪಾಗಿದ್ದು, ಅದನ್ನು ದಿನಗಟ್ಟಲೆ ಮರುಬಳಕೆ ಮಾಡುತ್ತಿರುವುದು ದೃಢಪಟ್ಟಿದೆ.
ಈ ಗಂಭೀರ ಉಲ್ಲಂಘನೆಗಳನ್ನು ಪತ್ತೆಹಚ್ಚಿದ ಅಧಿಕಾರಿಗಳು ತಕ್ಷಣವೇ ಮಳಿಗೆಯ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ಬೀಗ ಜಡಿದರು. ಸ್ಥಳದಿಂದ ಫ್ರೋಜನ್ ಲೆಗ್ ಪೀಸ್ ಹಾಗೂ ಮಸಾಲೆ ಬೆರೆಸಿದ ಮಾಂಸ ಸೇರಿದಂತೆ ಮೂರು ಬಗೆಯ ಚಿಕನ್ ಸ್ಯಾಂಪಲ್ ಮತ್ತು ಕರಿದ ಎಣ್ಣೆಯ ಮಾದರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳನ್ನು ಮೈಸೂರಿನ ಕೇಂದ್ರ ಆಹಾರ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ. ಈಗಾಗಲೇ ಮಳಿಗೆಯ ಆಡಳಿತ ಮಂಡಳಿಗೆ ಕಠಿಣ ನೋಟಿಸ್ ನೀಡಲಾಗಿದ್ದು, ಲ್ಯಾಬ್ ವರದಿ ಬಂದ ಬಳಿಕ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಅಧಿಕೃತವಾಗಿ ಮೊಕದ್ದಮೆ ಹೂಡಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.