Kannada News Next

news

ಶೀತ, ಜ್ವರಕ್ಕೆ ಇನ್ಮುಂದೆ ಹೇಳಿ ಬೈ-ಬೈ : ಮಾರುಕಟ್ಟೆಗೆ ಬಂದಿದೆ mRNA ಹೊಸ ಲಸಿಕೆ

ಜಾಗತಿಕ ಫಾರ್ಮಾ ದೈತ್ಯ 'ಮಾಡರ್ನಾ' ಕಂಪನಿಯು ಅಭಿವೃದ್ಧಿಪಡಿಸಿರುವ ಈ ನೂತನ ಇಂಜೆಕ್ಷನ್‌ಗೆ ಎಂ ಫ್ಲೂಸಿವಾ (mFlusiva) ಎಂದು ಹೆಸರಿಡಲಾಗಿದೆ.

By ರಶ್ಮಿ ಎಸ್. | Rashmi S
new mrna vaccine for cold and flu

ನವದೆಹಲಿ : ಜಾಗತಿಕ ಲಸಿಕಾ ರಂಗದಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸ್ಥಾಪನೆಯಾಗಿದ್ದು, ಕಾಲೋಚಿತ ನೆಗಡಿ ಹಾಗೂ ಜ್ವರವನ್ನು ತಡೆಗಟ್ಟುವ ವಿಶ್ವದ ಮೊದಲ ಎಂಆರ್‌ಎನ್‌ಎ ಆಧಾರಿತ ಲಸಿಕೆಗೆ ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆಯು ಹಸಿರು ನಿಶಾನೆ ನೀಡಿದೆ.

ಜಾಗತಿಕ ಫಾರ್ಮಾ ದೈತ್ಯ 'ಮಾಡರ್ನಾ' ಕಂಪನಿಯು ಅಭಿವೃದ್ಧಿಪಡಿಸಿರುವ ಈ ನೂತನ ಇಂಜೆಕ್ಷನ್‌ಗೆ ಎಂ ಫ್ಲೂಸಿವಾ (mFlusiva) ಎಂದು ಹೆಸರಿಡಲಾಗಿದೆ. ಸದ್ಯಕ್ಕೆ 5೦ ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಇದನ್ನು ಬಳಸಲು ಅನುಮತಿ ನೀಡಲಾಗಿದೆ.

ಕೋವಿಡ್ ಸಾಂಕ್ರಾಮಿಕದ ವೇಳೆ ಯಶಸ್ವಿಯಾಗಿದ್ದ ಇದೇ ನವೀನ ತಂತ್ರಜ್ಞಾನವನ್ನು ಈಗ ಸಾಂಪ್ರದಾಯಿಕ ಜ್ವರದ ವೈರಸ್‌ಗಳ ವಿರುದ್ಧ ಬಳಸಲಾಗುತ್ತಿದೆ. ಸಾಮಾನ್ಯವಾಗಿ ಹಳೆಯ ಲಸಿಕೆಗಳನ್ನು ತಯಾರಿಸಲು ಕೋಳಿ ಮೊಟ್ಟೆಗಳನ್ನು ಬಳಸಲಾಗುತ್ತಿತ್ತು ಮತ್ತು ಅದಕ್ಕೆ ತಿಂಗಳುಗಟ್ಟಲೆ ಸಮಯ ಬೇಕಾಗುತ್ತಿತ್ತು.

ಆದರೆ ಈ ಎಂಆರ್‌ಎನ್‌ಎ ತಂತ್ರಜ್ಞಾನದಿಂದ ಅತ್ಯಂತ ವೇಗವಾಗಿ ಕೇವಲ ಕೆಲವು ವಾರಗಳಲ್ಲೇ ಲಸಿಕೆಯನ್ನು ನವೀಕರಿಸಬಹುದು. ರೂಪಾಂತರಗೊಳ್ಳುವ ಜ್ವರದ ತಳಿಗಳಿಗೆ ತಕ್ಕಂತೆ ಇದನ್ನು ಸುಲಭವಾಗಿ ಮಾರ್ಪಡಿಸಬಹುದಾಗಿದೆ. ಸುಮಾರು 4೦,೦೦೦ಕ್ಕೂ ಹೆಚ್ಚು ಜನರ ಮೇಲೆ ನಡೆಸಲಾದ ಬೃಹತ್ ಕ್ಲಿನಿಕಲ್ ಪ್ರಯೋಗಗಳ ಬಳಿಕ ಈ ಒಪ್ಪಿಗೆ ಸಿಕ್ಕಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಸಾಮಾನ್ಯ ಇಂಜೆಕ್ಷನ್‌ಗಳಿಗೆ ಹೋಲಿಸಿದರೆ, ಹೊಸ 'mFlusiva' ಲಸಿಕೆಯು ಶೇಕಡಾ 26.6 ರಷ್ಟು ಹೆಚ್ಚು ಪರಿಣಾಮಕಾರಿಯಾಗಿ ರೋಗವನ್ನು ತಡೆಯುತ್ತದೆ ಎಂದು ಸಾಬೀತಾಗಿದೆ. ಈ ಚುಚ್ಚುಮದ್ದಿನಲ್ಲಿ ಯಾವುದೇ ಜೀವಂತ ವೈರಸ್ ಇಲ್ಲದಿರುವುದರಿಂದ, ಲಸಿಕೆ ಪಡೆದ ತಕ್ಷಣ ಯಾರಿಗೂ ಇನ್ಫ್ಲುಯೆಂಜಾ ರೋಗ ತಗಲುವ ಅಪಾಯವಿರುವುದಿಲ್ಲ.

ಸದ್ಯಕ್ಕೆ ಈ ಕ್ರಾಂತಿಕಾರಿ ಲಸಿಕೆಯು ಕೇವಲ ಅಮೆರಿಕದ ಮಾರುಕಟ್ಟೆಗೆ ಮಾತ್ರ ಸೀಮಿತವಾಗಿದೆ. ಭಾರತಕ್ಕೆ ಇದು ಲಭ್ಯವಾಗಬೇಕಾದರೆ ಭಾರತೀಯ ಔಷಧ ನಿಯಂತ್ರಣ ಸಂಸ್ಥೆಯು ಮುಂದಿನ ದಿನಗಳಲ್ಲಿ ಪರಿಶೀಲನೆ ನಡೆಸಿ ಸೂಕ್ತ ಅನುಮೋದನೆ ನೀಡಬೇಕಾಗುತ್ತದೆ.

ಅಲ್ಲಿಯವರೆಗೂ ದೇಶದಲ್ಲಿ ಹಳೆಯ ಸಾಂಪ್ರದಾಯಿಕ ಲಸಿಕೆಗಳೇ ಬಳಕೆಯಲ್ಲಿರಲಿವೆ. ಈ ಸಂಶೋಧನೆಯು ಭವಿಷ್ಯದಲ್ಲಿ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳಿಗೂ ಸುಲಭವಾಗಿ ಮದ್ದು ಕಂಡುಹಿಡಿಯಬಹುದು ಎಂಬ ಭರವಸೆ ಮೂಡಿಸಿದೆ.