ನವದೆಹಲಿ : ದೇಶದಲ್ಲಿ ರಸ್ತೆ ಸುರಕ್ಷತಾ ನಿಯಮಗಳನ್ನು ಮತ್ತಷ್ಟು ಕಟ್ಟುನಿಟ್ಟಾಗಿಸಲು ಸುಪ್ರೀಂ ಕೋರ್ಟ್ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ. ಚಾಲ್ತಿಯಲ್ಲಿರುವ ವಿಮೆ ಹೊಂದಿರದ ವಾಹನಗಳಿಗೆ ದೇಶದ ಯಾವುದೇ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ನೀಡದಂತೆ ತಡೆಯುವ ಹೊಸ ನಿಯಮವನ್ನು ಜಾರಿಗೆ ತರಲು ನ್ಯಾಯಾಲಯವು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಹಾಗೂ ವಿಮಾ ನಿಯಂತ್ರಣ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಈ ಯೋಜನೆಯ ಪ್ರಕಾರ, ಭವಿಷ್ಯದಲ್ಲಿ ವಾಹನಗಳಿಗೆ ಪೆಟ್ರೋಲ್ ಅಥವಾ ಡೀಸೆಲ್ ತುಂಬಿಸುವ ಮುನ್ನ ಬಂಕ್‌ಗಳಲ್ಲಿ ಇನ್ಶೂರೆನ್ಸ್ ಸ್ಟೇಟಸ್ ಪರಿಶೀಲನೆ ಕಡ್ಡಾಯವಾಗುವ ಸಾಧ್ಯತೆಯಿದೆ. ಆರಂಭಿಕ ಹಂತದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ಬರಲಿರುವ ಈ ಡಿಜಿಟಲ್ ವ್ಯವಸ್ಥೆಯು ವಿಮೆ ಇಲ್ಲದ ವಾಹನಗಳನ್ನು ರಸ್ತೆಗಿಳಿಯದಂತೆ ನಿಯಂತ್ರಿಸುವ ಮುಖ್ಯ ಉದ್ದೇಶ ಹೊಂದಿದೆ.
ಹೆದ್ದಾರಿಗಳಲ್ಲಿ ಅಳವಡಿಸಲಾಗಿರುವ ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್ ಕ್ಯಾಮೆರಾಗಳನ್ನು ಸರ್ಕಾರದ 'ವಾಹನ್' ಮತ್ತು ವಿಮಾ ಡೇಟಾಬೇಸ್ ಪೋರ್ಟಲ್‌ಗಳಿಗೆ ನೇರವಾಗಿ ಲಿಂಕ್ ಮಾಡಲಾಗುತ್ತದೆ. ಇದರಿಂದಾಗಿ ಇನ್ಶೂರೆನ್ಸ್ ಅವಧಿ ಮುಗಿದ ವಾಹನಗಳು ರಸ್ತೆಯಲ್ಲಿ ಸಂಚರಿಸಿದರೆ ಸ್ವಯಂಚಾಲಿತವಾಗಿ ಆನ್‌ಲೈನ್ ಮೂಲಕ 'ಇ-ಚಲನ್' ದಂಡ ಸೃಷ್ಟಿಯಾಗಲಿದೆ.
ಪೊಲೀಸರಿಗೂ ಸಹ ದಾಖಲೆಗಳನ್ನು ಭೌತಿಕವಾಗಿ ಪರಿಶೀಲಿಸುವ ಅಗತ್ಯವಿಲ್ಲದೆ, ವಿಶೇಷ ಮೊಬೈಲ್ ಆಪ್‌ಗಳ ಮೂಲಕ ತಕ್ಷಣವೇ ವಾಹನದ ವಿಮೆ ಸ್ಥಿತಿಯನ್ನು ಪತ್ತೆಹಚ್ಚಲು ಹ್ಯಾಂಡ್‌ಹೆಲ್ಡ್ ಸಾಧನಗಳನ್ನು ನೀಡಲಾಗುತ್ತಿದೆ.
ಇದರೊಂದಿಗೆ ಹೊಸ ವಾಹನ ಖರೀದಿದಾರರಿಗೂ ಮಹತ್ವದ ಬದಲಾವಣೆಯನ್ನು ತರಲಾಗುತ್ತಿದ್ದು, ಕಾರುಗಳ ಕಡ್ಡಾಯ ಥರ್ಡ್ ಪಾರ್ಟಿ ವಿಮೆ ಅವಧಿಯನ್ನು 3 ರಿಂದ 4 ವರ್ಷಗಳಿಗೆ ಹಾಗೂ ದ್ವಿಚಕ್ರ ವಾಹನಗಳ ವಿಮೆಯನ್ನು 5 ರಿಂದ 6 ವರ್ಷಗಳಿಗೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ.
ಸದ್ಯಕ್ಕೆ ಇದು ಪ್ರಾಥಮಿಕ ಹಂತದ ಪ್ರಸ್ತಾವನೆಯಾಗಿದ್ದು, ಸಾಮಾನ್ಯ ಸಾರ್ವಜನಿಕರಿಗೆ ಹಾಗೂ ಪೆಟ್ರೋಲ್ ಬಂಕ್ ಮಾಲೀಕರ ದೈನಂದಿನ ವ್ಯಾಪಾರಕ್ಕೆ ಯಾವುದೇ ರೀತಿಯ ಅನನುಕೂಲ ಉಂಟಾಗದಂತೆ ತಾಂತ್ರಿಕವಾಗಿ ಇದನ್ನು ಹೇಗೆ ಜಾರಿಗೊಳಿಸಬೇಕು ಎಂಬುದರ ಕುರಿತು ತಜ್ಞರು ಸುದೀರ್ಘ ಪರಿಶೀಲನೆ ನಡೆಸುತ್ತಿದ್ದಾರೆ.