Kannada News Next

udupi

ಉಡುಪಿಯಲ್ಲಿ ಭೀಕರ ಅಪಘಾತ: ಖಾಸಗಿ ಬಸ್ ಡಿಕ್ಕಿಯಾಗಿ ನಗರಸಭೆ ಮಾಜಿ ಉಪಾಧ್ಯಕ್ಷೆ ಸಾವು!

ಉಡುಪಿ: ನಗರದ ಲಯನ್ಸ್ ಸರ್ಕಲ್ ಬಳಿ ಇಂದು ನಡೆದ ಭೀಕರ ರಸ್ತೆ ಅಪಘಾತದಲ್ಲಿ ಉಡುಪಿ ನಗರಸಭೆಯ ಮಾಜಿ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಕೊಳ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

By Meghana Pranuth | ಮೇಘನಾ ಪ್ರಣೂತ್‌

ಉಡುಪಿ: ನಗರದ ಲಯನ್ಸ್ ಸರ್ಕಲ್ ಬಳಿ ಇಂದು ನಡೆದ ಭೀಕರ ರಸ್ತೆ ಅಪಘಾತದಲ್ಲಿ ಉಡುಪಿ ನಗರಸಭೆಯ ಮಾಜಿ ಉಪಾಧ್ಯಕ್ಷೆ ಹಾಗೂ ಬಿಜೆಪಿ ಮುಖಂಡ ಮಂಜುಕೊಳ ಅವರ ಪತ್ನಿ ಲಕ್ಷ್ಮೀ ಮಂಜುನಾಥ್ ಕೊಳ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಮಾಹಿತಿಯ ಪ್ರಕಾರ, ಲಕ್ಷ್ಮೀ ಮಂಜುನಾಥ್ ಅವರು ನಗರದ ನೈವೇದ್ಯ ಹೋಟೆಲ್ ಸಮೀಪದ ಲಯನ್ಸ್ ಸರ್ಕಲ್ ಬಳಿ ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಖಾಸಗಿ ಬಸ್‌ ಒಂದೂ ಸಡನ್ ಆಗಿ ಅವರಿಗೆ ಢಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ತೀವ್ರ ಗಾಯಗೊಂಡ ಅವರು ಘಟನಾ ಸ್ಥಳದಲ್ಲೇ ಸಾವುನ್ನಪ್ಪಿದ್ದಾರೆ.

ಘಟನೆ ತಿಳಿಯುತ್ತಿದ್ದಂತೆಯೇ ಉಡುಪಿ ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಅಪಘಾತ ಎಸಗಿದ ಖಾಸಗಿ ಬಸ್ ಮತ್ತು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಹಿರಿಯ ಬಿಜೆಪಿ ನಾಯಕಿ ಹಾಗೂ ನಗರಸಭೆಯ ಮಾಜಿ ಉಪಾಧ್ಯಕ್ಷೆಯ ಅಕಾಲಿಕ ಮರಣಕ್ಕೆ ಉಡುಪಿಯ ಹಲವು ಮುಖಂಡರು ಮತ್ತು ಸಾರ್ವಜನಿಕರು ತೀವ್ರ ಕಂಬನಿ ಮಿಡಿದಿದ್ದಾರೆ.