ಕಾರ್ಕಳ: ಮಲೇಷ್ಯಾದ ರೆಸ್ಟೋರೆಂಟ್‌ವೊಂದರಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಫೋಟೋಗ್ರಾಫರ್ ಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ವಂಚನೆ ಪ್ರಕರಣ ?
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮದ ಪ್ರಕಾಶ್ ಆಚಾರ್ಯ (34 ವರ್ಷ) ಎಂಬವರು ಪೋಟೋಗ್ರಾಫರ್ ಆಗಿ ಕೆಲಸ ಮಾಡಿಕೊಂಡಿದ್ದರು. ಕಾರ್ಕಳ ತಾಲೂಕಿನ ಬಜಗೋಳಿಯ ನಿವಾಸಿಯಾಗಿರುವ ಕೃಷ್ಣ ಕುಲಾಲ್ ಹಾಗೂ ಬೆಂಗಳೂರಿನ ಮೋಹಿತ್ ಎಂಬವರು ಸಂಪರ್ಕಿಸಿದ್ದರು. ಮಲೇಷಿಯಾದ ರೆಸ್ಟೋರೆಂಟ್ ವೊಂದರಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದರು. ಅಲ್ಲದೇ ಜಾಹೀರಾತಿನ ಪೋಟೋವನ್ನು ಕಳುಹಿಸಿ ಕೊಟ್ಟಿದ್ದರು.
ಮಲೇಷ್ಯಾದ ವೀಸಾ, ಪ್ರಯಾಣದ ವೆಚ್ಚಕ್ಕಾಗಿ ಪ್ರಕಾಶ್ ಆಚಾರ್ಯ ಅವರಿಂದ ಆರೋಪಿಗಳು ಗೂಗಲ್ ಪೇ ಮೂಲಕ ಹಂತ ಹಂತವಾಗಿ ಒಂದನೇ ಆರೋಪಿ ಕೃಷ್ಣ ಕುಲಾಲ್ ಖಾತೆಗೆ 1.40 ಲಕ್ಷ ಹಾಗೂ 2ನೇ ಆರೋಪಿಯಾಗಿರುವ ಮೋಹಿತ್ ಖಾತೆಗೆ 85 ಸಾವಿರ ರೂಪಾಯಿಯನ್ನು ವರ್ಗಾಯಿಸಿಕೊಂಡಿದ್ದರು.
ನಕಲಿ ಎಂಪ್ಲಾಯ್‌ಮೆಂಟ್ ಪಾಸ್ ಕಳುಹಿಸಿದ್ದ ವಂಚಕರು
ಪ್ರಶಾಶ್ ಆಚಾರ್ಯ ಅವರಿಂದ ಹಣ ಪಡೆದ ನಂತರದಲ್ಲಿ ಆರೋಪಿಗಳು ಮಲೇಷ್ಯಾಕ್ಕೆ ತೆರಳಲು ವಿಮಾನದ ಟಿಕೆಟ್, ಇಮಿಗ್ರೇಷನ್ ಪಾಸ್ ಹಾಗೂ ಎಂಪ್ಲಾಯ್‌ಮೆಂಟ್ ಪಾಸ್ ಕಳುಹಿಸಿಕೊಟ್ಟಿದ್ದರು. ಇದನ್ನು ನಂಬಿದ ಪ್ರಕಾಶ್ ಆಚಾರ್ಯ ಅವರು ಮಲೇಷ್ಯಾಕ್ಕೆ ತೆರಳಿದಾಗ ಅಲ್ಲಿನ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದಾಗ ಅವು ಸಂಪೂರ್ಣ ನಕಲಿ ಪಾಸ್ ಅನ್ನೋದು ದೃಢಪಟ್ಟಿತ್ತು.
ಇವರಿಬ್ಬರು ಮಾತ್ರವಲ್ಲ, ಮಲೇಷಿಯಾದಲ್ಲಿದ್ದ ಸಮಯದಲಿ ಮನ್ವಿರ್ ಸಿಂಗ್ ಎಂಬ ಮತ್ತೋರ್ವ ಏಜೆಂಟ್ ಕೂಡ 35 ಸಾವಿರ ರೂಪಾಯಿ ಪಡೆದು ವಂಚಿಸಿದ್ದ. ಇದೀಗ ಮೋಸ ಹೋಗಿರುವ ಪ್ರಶಾಂತ್ ಆಚಾರ್ಯ ಅವರು ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.