News Next Kannada

udupi

Karkala ಇನ್ನಾ ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೈವಸ್ಥಾನದಲ್ಲಿ ಕಳವು; ₹1.20 ಲಕ್ಷ ಕಾಣಿಕೆ ಹಣ ದೋಚಿ ಪರಾರಿ

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಮಡ್ಮಣ್‌ ಎಂಬಲ್ಲಿ ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೈವಸ್ಥಾನದಲ್ಲಿ ನಡೆದಿದೆ.

By Arun Gundmi | ಅರುಣ್‌ ಗುಂಡ್ಮಿ Editor-in-Chief
karkalla inna daivasthana theft 1-20 lakh

ಕಾರ್ಕಳ: ದೈವಸ್ಥಾನದ ಬೀಗ ಒಡೆದು ಕಾಣಿಕೆ ಡಬ್ಬವನ್ನು ಕಳವು ಮಾಡಿ, ಸುಮಾರು 1.20 ಲಕ್ಷ ರೂಪಾಯಿ ಕಾಣಿಕೆ ಹಣವನ್ನು ದೋಚಿ ಪರಾರಿಯಾಗಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಮಡ್ಮಣ್‌ ಎಂಬಲ್ಲಿ ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೈವಸ್ಥಾನದಲ್ಲಿ ನಡೆದಿದೆ.

ಅಗಸ್ಟ್‌ 12ರ ಮುಂಜಾನೆಯ ವೇಳೆಯಲ್ಲಿ ಈ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ದೈವಸ್ಥಾನದಲ್ಲಿ ನಿತ್ಯವೂ ಸ್ವಚ್ಚತಾ ಕಾರ್ಯವನ್ನು ನಡೆಸುತ್ತಿದ್ದ ಬಾಲಕೃಷ್ಣ ಶೆಟ್ಟಿ ಎಂಬವರು ಬೆಳಗ್ಗೆ 6.30ಕ್ಕೆ ದೈವಸ್ಥಾನದ ಮುಂಭಾಗದಲ್ಲಿನ ಬಾಗಿಲ ಬೀಗ ಮುರಿದಿರುವುದನ್ನು ಗಮನಿಸಿದ್ದಾರೆ.

ದೈವಸ್ಥಾನದ ಒಳಗೆ ತೆರಳಿ ಪರಿಶೀಲಿಸಿದಾಗ ಕಾಣಿಕೆ ಡಬ್ಬಿ ಹಾನಿಯಾಗಿರುವುದು ತಿಳಿದು ಬಂದಿದೆ. ಈ ಕುರಿತು ದೈವಸ್ಥಾನದ ಕಮಿಟಿಯ ಕಾರ್ಯದರ್ಶಿ ಸುನಿಲ್‌ ಕುಮಾರ್‌ ಅವರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ದೈವಸ್ಥಾನದ ಅಧ್ಯಕ್ಷರು ಹಾಗೂ ಇತರರು ಪರಿಶೀಲನೆ ನಡೆಸಿದ ವೇಳೆಯಲ್ಲಿ ಕಳವು ನಡೆದಿರುವುದು ಬೆಳಕಿಗೆ ಬಂದಿದೆ.

ಎರಡು ಕಾಣಿಕೆ ಡಬ್ಬಿಗಳಿಗೂ ಹಾನಿ

ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಪಡುಬಿದ್ರಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳರು ಮೊದಲು ದೈವಸ್ಥಾನದ ಮುಂಭಾಗದಲ್ಲಿದ್ದ ಗ್ರಿಲ್‌ ಶೆಟರ್‌ನ ಬೀಗ ಮುರಿದು ಒಳಗೆ ಪ್ರವೇಶಿಸಿದ್ದಾರೆ. ನಂತರ ಒಳಭಾಗದಲ್ಲಿ ಇರಿಸಲಾಗಿದ್ದ ಬೀಗ ಹಾಕಿದ್ದ ಎರಡು ಕಾಣಿಕೆ ಡಬ್ಬಿಗಳನ್ನು ಒಡೆದಿದ್ದಾರೆ.

ಒಂದು ಕಾಣಿಕೆ ಡಬ್ಬಿಯ ಸಂಪೂರ್ಣ ಬೀಗವನ್ನೇ ಒಡೆದಿದ್ರೆ, ಮತ್ತೊಂದು ಕಾಣಿಕೆ ಡಬ್ಬಿಯ ಬೀಗದ ಕೊಂಡಿಗೆ ಹಾನಿ ಮಾಡಿದ್ದಾರೆ. ಎರಡು ಡಬ್ಬಗಳಲ್ಲಿ ಅಂದಾಜು 1.20 ಲಕ್ಷ ರೂಪಾಯಿ ಹಣವನ್ನು ಕಳ್ಳರು ಕದ್ದೊಯ್ದಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಮಡ್ಮಣ್‌ ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೈವಸ್ಥಾನದ ಕಮಿಟಿಯ ಕಾರ್ಯದರ್ಶಿ ಸುನಿಲ್‌ ಕುಮಾರ್‌ ಅವರು ನೀಡಿದ ದೂರಿನ ಆಧಾರದ ಮೇಲೆ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.