Kannada News Next

udupi

ಕುಂದಾಪುರ ಉದ್ಯಮಿ ಹತ್ಯೆ ಪ್ರಕರಣ : 24 ಗಂಟೆಗಳೊಳಗಾಗಿ ಆರೋಪಿ ಬಂಧನ

ಜುಲೈ 31ರ ಮುಂಜಾನೆ ಜರುಗಿದ ಭೀಕರ ಶೂಟೌಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ, ತಲೆಮರೆಸಿಕೊಂಡಿದ್ದ ಮುಖ್ಯ ಆರೋಪಿಯನ್ನು ಪೊಲೀಸರು ಕೇವಲ 24 ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

By Meghana Pranuth | ಮೇಘನಾ ಪ್ರಣೂತ್‌
ac arrest

ಉಡುಪಿ ಜಿಲ್ಲೆಯ ಕುಂದಾಪುರ ನಗರದ ಚರ್ಚ್ ರಸ್ತೆಯಲ್ಲಿ ಜುಲೈ 31ರ ಮುಂಜಾನೆ ಜರುಗಿದ ಭೀಕರ ಶೂಟೌಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ, ತಲೆಮರೆಸಿಕೊಂಡಿದ್ದ ಮುಖ್ಯ ಆರೋಪಿಯನ್ನು ಪೊಲೀಸರು ಕೇವಲ 24 ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೆಮ್ಮಾಡಿ ಸಮೀಪದ ಕನ್ನಡಕುದ್ರು ಮೂಲದ, ಪ್ರಸ್ತುತ ಸ್ಥಳೀಯ ಫ್ಲ್ಯಾಟ್‌ ಒಂದರಲ್ಲಿ ನೆಲೆಸಿದ್ದ ಡೆರಿಕ್ ಕ್ರಾಸ್ತಾ ಬಂಧಿತ ಆರೋಪಿಯಾಗಿದ್ದಾನೆ. ಬಾರ್ಕೂರು ಮೂಲದ ಉದ್ಯಮಿ ಐವನ್ ರಿಚರ್ಡ್ ಮಸ್ಕರೇನಸ್ ಯಾನೆ ಮುನ್ನಾ ಎಂಬವರನ್ನು ಈತ ಗುಂಡಿಕ್ಕಿ ಕೊಲೆ ಮಾಡಿದ್ದ.

ಪೊಲೀಸ್ ಮೂಲಗಳ ಪ್ರಕಾರ, ಮೃತ ಐವನ್ ಹಾಗೂ ಆರೋಪಿ ಡೆರಿಕ್ ಇಬ್ಬರೂ ಜಂಟಿಯಾಗಿ ಸೀಗಡಿ ಸಾಕಣೆ ಹಾಗೂ ರಫ್ತು ವ್ಯವಹಾರ ನಡೆಸುತ್ತಿದ್ದರು. ಕಳೆದ ಕೆಲವು ತಿಂಗಳುಗಳಿಂದ ಇಬ್ಬರ ನಡುವೆ ದೊಡ್ಡ ಮೊತ್ತದ ಹಣಕಾಸಿನ ವಹಿವಾಟಿಗೆ ಸಂಬಂಧಿಸಿದಂತೆ ತೀವ್ರ ಭಿನ್ನಾಭಿಪ್ರಾಯ ಮೂಡಿತ್ತು. ಜುಲೈ 30ರ ರಾತ್ರಿ ಫೋನ್‌ನಲ್ಲಿ ಮಾತನಾಡುವಾಗ ಇಬ್ಬರ ನಡುವೆ ವಾಗ್ವಾದ ನಡೆದಿತ್ತು.

ಈ ವೇಳೆ ಡೆರಿಕ್ ತನ್ನ ಲೊಕೇಶನ್ ಕಳುಹಿಸಿ, ಧೈರ್ಯವಿದ್ದರೆ ಬರುವಂತೆ ಸವಾಲು ಹಾಕಿದ್ದ. ಅದರಂತೆ ಐವನ್ ತನ್ನ ಮಹಿಳಾ ಸ್ನೇಹಿತೆಯೊಂದಿಗೆ ಕಾರಿನಲ್ಲಿ ಬಂದು ಚರ್ಚ್ ರಸ್ತೆಯಲ್ಲಿ ಕಾಯುತ್ತಿದ್ದರು. ಮುಂಜಾನೆ 3:15ರ ಸುಮಾರಿಗೆ ಸ್ಥಳಕ್ಕೆ ಸ್ಕೂಟರ್‌ನಲ್ಲಿ ಬಂದ ಡೆರಿಕ್, ಐವನ್ ಕಾರಿನಿಂದ ಕೆಳಗಿಳಿಯುತ್ತಿದ್ದಂತೆ ಪಿಸ್ತೂಲಿನಿಂದ ಸೊಂಟದ ಭಾಗಕ್ಕೆ ಪಾಯಿಂಟ್ ಬ್ಲಾಂಕ್ ರೇಂಜ್‌ನಲ್ಲಿ ಗುಂಡು ಹಾರಿಸಿ ಪರಾರಿಯಾಗಿದ್ದ. ತೀವ್ರ ರಕ್ತಸ್ರಾವದಿಂದ ಐವನ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರು.

ಘಟನೆಯ ಗಂಭೀರತೆ ಅರಿತ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಕ್ಷಣವೇ ಆರೋಪಿಯ ಪತ್ತೆಗೆ ಮೂರು ಪ್ರತ್ಯೇಕ ವಿಶೇಷ ತನಿಖಾ ತಂಡಗಳನ್ನು ರಚಿಸಿದ್ದರು. ತಾಂತ್ರಿಕ ನಿಗಾ ಹಾಗೂ ಮೊಬೈಲ್ ಲೊಕೇಶನ್ ಆಧರಿಸಿ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು, ನೆರೆಯ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಬೆಳಕೆ ಹೇರಬುಡಿಕೆ ಎಂಬ ತೀರ ಪ್ರದೇಶದಲ್ಲಿ ಅಡಗಿದ್ದ ಡೆರಿಕ್‌ನನ್ನು ಶನಿವಾರ ಮಧ್ಯಾಹ್ನ ಹೆಡೆಮುರಿಕಟ್ಟಿದ್ದಾರೆ. ಆರೋಪಿಯಿಂದ ಹತ್ಯೆಗೆ ಬಳಸಿದ ಅಕ್ರಮ ಆಯುಧ ಹಾಗೂ ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಕುಂದಾಪುರ ಠಾಣೆಯಲ್ಲಿ ಕಾನೂನು ಪ್ರಕ್ರಿಯೆ ಮುಂದುವರಿದಿದೆ.